ADVERTISEMENT

ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದರೆ ಕ್ರಮ ಕೈಗೊಳ್ಳಿ: ಶಾಸಕ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 2:37 IST
Last Updated 7 ಆಗಸ್ಟ್ 2025, 2:37 IST
ಶ್ರೀರಂಗಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಕೆ. ವಿವೇಕಾನಂದ, ಪುರಸಭೆ ಅಧ್ಯಕ್ಷ ಎಂ.ಎಲ್‌. ದಿನೇಶ್ ಪಾಲ್ಗೊಂಡಿದ್ದರು
ಶ್ರೀರಂಗಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಕೆ. ವಿವೇಕಾನಂದ, ಪುರಸಭೆ ಅಧ್ಯಕ್ಷ ಎಂ.ಎಲ್‌. ದಿನೇಶ್ ಪಾಲ್ಗೊಂಡಿದ್ದರು   

ಶ್ರೀರಂಗಪಟ್ಟಣ: ‘ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಪೊಲೀಸ್‌ ಮತ್ತು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ‘ಯೂರಿಯಾ ರಸಗೊಬ್ಬರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ ಬಗ್ಗೆ ನಿಗಾ ವಹಿಸಬೇಕು. ಕಾಂಪ್ಲೆಕ್ಸ್‌ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸಮಗ್ರ ಕೃಷಿ ಯೋಜನೆಯಡಿ ಕೊಡಿಯಾಲ ಮತ್ತು ಗಾಮನಹಳ್ಳಿ ಗ್ರಾಮಗಳಲ್ಲಿ 100 ಮಂದಿ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಬೇಕು’ ಎಂದು ಹೇಳಿದರು.

'ಮುಂದಿನ ವಾರದಿಂದ ಗ್ರಾ.ಪಂ. ಮಟ್ಟದಲ್ಲಿ ಕಂದಾಯ ಅದಾಲತ್‌ ಏರ್ಪಡಿಸಿ ಪೌತಿ ಖಾತೆ, ಪಿಂಚಣಿ ಮಂಜೂರಾತಿ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇದರ ಜತೆ ಜತೆಗೇ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಬೇಕು. ಸರ್ಕಾರದ ಸವಲತ್ತುಗಳು ಅರ್ಹರಿಗೆ ತಲುಪಬೇಕು. ತಾಲ್ಲೂಕಿನಲ್ಲಿ ಆಧಾರ್‌ ಸೀಡಿಂಗ್‌ ಪ್ರಮಾಣ ಕಡಿಮೆ ಇದ್ದು, ಬಾಕಿ ಇರುವ 1938 ಸೀಡಿಂಗ್‌ಗಳನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ತಹಶೀಲ್ದಾರ್ ಅವರಿಗೆ ಹೇಳಿದರು.

ADVERTISEMENT

‘ಒಕ್ಕಲಿಗರ ಸಂಘ, ಸವಿತಾ ಸಮಾಜ ಹಾಗೂ ಉಪ್ಪಾರ ಸಮಾಜಕ್ಕೆ ಅಭಿವೃದ್ಧಿ ನಿಗಮಗಳಿಂದ ಬರುವ ಅನುದಾನ ಬಿಡುಗಡೆ ಮಾಡಿಸಬೇಕು’ ಎಂದು ಬಿಸಿಎಂ ಇಲಾಖೆ ಅಧಿಕಾರಿ ಪುಷ್ಪಾ ಅವರಿಗೆ ತಿಳಿಸಿದರು.

‘ಹಾವು ಕಡಿದು ವ್ಯಕ್ತಿ ಮೃತಪಟ್ಟ ಪ್ರಕರಣಗಳು ಬೆಳಕಿಗೆ ಬಂದರೆ ಕೃಷಿ ಮತ್ತು ಕಂದಾಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಬೇಕು. ಮೂರು ದಿನಗಳಲ್ಲಿ ವರದಿ ಸಿದ್ದಪಡಿಸಬೇಕು. ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

‘ಜಾನುವಾರುಗಳಿಗೆ ಬರುವ ಬ್ರುಸೆಲಸಿಸ್‌ ವೈರಾಣು ಮನುಷ್ಯರಿಗೂ ತಗುಲುವ ಅಪಾಯವಿದೆ. ಹಾಲಿನ ಮೂಲಕವೂ ಈ ವೈರಾಣು ಮನುಷ್ಯರ ದೇಹ ಸೇರುವ ಅಪಾಯವಿದ್ದು, ಲಸಿಕೆ ಹಾಕಲಾಗುತ್ತಿದೆ’ ಎಂದು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರವೀಣ್‌ಕುಮಾರ್‌ ಹೇಳಿದರು.

‘ತಾಲ್ಲೂಕಿನಲ್ಲಿ ಶಿಕ್ಷಕರ ವೈದ್ಯಕೀಯ ಬಿಲ್‌ ₹ 3.70ಕೋಟಿ ಬಾಕಿ ಇದೆ. ಬಿಡುಗಡೆ ಮಾಡುವಂತೆ ಮೇಲಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಪಿ. ಮಹೇಶ್ ಮಾಹಿತಿ ನೀಡಿದರು.

‘ಕೆಆರ್‌ಎಸ್‌ ಬಳಿ ನಡೆಸಲು ಉದ್ದೇಶಿಸಿರುವ ಕಾವೇರಿ ಆರತಿ ಕಾರ್ಯಕ್ರಮ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಸೆ.1ರಂದು ವಿಚಾರಣೆ ಬರಲಿದೆ ’ ಎಂದು ಕಾವೇರಿ ನೀರಾವರಿ ನಿಗಮದ ಎಇಇ ಫಾರೂಕ್‌ ಅಬು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ. ವಿವೇಕಾನಂದ, ಪುರಸಭೆ ಅಧ್ಯಕ್ಷ ಎಂ.ಎಲ್‌. ದಿನೇಶ್, ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ.ಪಿ, ತಹಶೀಲ್ದಾರ್‌ ಚೇತನಾ ಯಾದವ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು, ತಾಲ್ಲೂಕು ಯೋಜನಾಧಿಕಾರಿ ಎಂ.ಎಂ. ತ್ರಿವೇಣಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಂ. ನಂದೀಶ್, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಶಾಲೆಗಳ ಆವರಣದಲ್ಲಿ ಹಣ್ಣಿನ ಗಿಡಗಳು ಸೊಪ್ಪು ತರಕಾರಿ ಬೆಳೆಸಬೇಕು. ಶಾಲಾ ಶೌಚಾಲಯಗಳು ಸ್ವಚ್ಛವಾಗಿರಬೇಕು. ಮೂಲ ಸೌಕರ್ಯದ ಕೊರತೆ ಇದ್ದರೆ ತಕ್ಷಣ ಗಮನಕ್ಕೆ ತರಬೇಕು
ರಮೇಶ ಬಂಡಿಸಿದ್ದೇಗೌಡ ಶಾಸಕ

ದಸರಾ ಉತ್ಸವದಲ್ಲಿ ರಾಸುಗಳ ಮೆರವಣಿಗೆ

‘ಮುಂದಿನ ತಿಂಗಳು ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದಲ್ಲಿ ಪುರಸಭೆ ಕಚೇರಿ ವೃತ್ತದಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ವರೆಗೆ ಉತ್ತಮ ಮತ್ತು ಆಯ್ದ ರಾಸುಗಳ ಮೆರವಣಿಗೆಯನ್ನು ಆಯೋಜಿಸಬೇಕು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಕೃಷಿ ಹೈನುಗಾರಿಕೆ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಕಾರ್ಯಕ್ರಮಗಳನ್ನು ಪ್ರದರ್ಶಿಸಬೇಕು. ಕಾವೇರಿ ನೀರಾವರಿ ನಿಗಮ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳನ್ನು ಬಿತ್ತರಿಸಲು ಸಿದ್ದತೆ ಮಾಡಿಕೊಳ್ಳಬೇಕು’ ಎಂದು ರಮೇಶ ಬಂಡಿಸಿದ್ದೇಗೌಡ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.