ಪಾಂಡವಪುರ: ಪಟ್ಟಣದ ಕೆಲವೆಡೆ ಸರ್ಕಾರಿ ಜಾಗ ಕಬಳಿಕೆಯಾಗಿರುವ ಬಗ್ಗೆ ಆರೋಪ ಕೇಳಿ ಬರುತ್ತಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದು ತನಿಖೆ ನಡೆಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಪುರಸಭೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದ ವಿವಿಧ ಬಡಾವಣೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರು ಇನ್ನೂ ಪೂರ್ಣಗೊಳಿಸಿಲ್ಲ. ಸೂಚನೆ ನೀಡಿದ್ದರೂ ಇದಕ್ಕೆ ಸ್ಪಂದಿಸಿಲ್ಲ. ಗುತ್ತಿಗೆದಾರರ ವರ್ತನೆ ಹೀಗೆ ಮುಂದುವರಿದರೆ ಕಪ್ಪು ಪಟ್ಟಿಗೆ ಸೇರಿಸಲು ಅಗತ್ಯ ಕ್ರಮವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಸೂಕ್ತ ಸ್ಥಳ ಗುರುತಿಸಿ ಅಲ್ಲಿಗೆ ಸ್ಥಳಾಂತರಿಸಲು ಆಲೋಚಿಸಲಾಗುತ್ತಿದೆ ಎಂದು ತಿಳಿಸಿದರು.
ಸದಸ್ಯ ಯಶವಂತ್ ಕುಮಾರ್ ಮಾತನಾಡಿ, ಪಟ್ಟಣದ ಪೌರಕಾರ್ಮಿಕರ ಕಾಲೋನಿಯಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಿಸುತ್ತಿರುವ 25X35 ಅಳತೆಯ 6 ವಸತಿ ಗೃಹಗಳಿಗೆ ₹1.60 ಕೋಟಿ ಅಂದಾಜಿಸಿ ನಕ್ಷೆ ತಯಾರಿಸಲಾಗಿದೆ. ರಸ್ತೆ ಇಲ್ಲದೆ ಇರುವ 28 ನಿವೇಶನಗಳಿಗ ಒಂದೇ ಪಿಐಡಿ ನಂಬರ್ ಕೊಡಲಾಗಿದೆ. ಇಷ್ಟೊಂದು ಅಕ್ರಮ ನಡೆಸಿರುವ ಈ ಹಿಂದಿನ ಕಂದಾಯ ಅಧಿಕಾರಿ ಮಹದೇವಸ್ವಾಮಿ ವಿರುಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯ ಪಾರ್ಥಸಾರಥಿ ಮಾತನಾಡಿ, ಪಟ್ಟಣದ ನಿವಾಸಿ ಜಿತೇಂದ್ರಕುಮಾರ್ ಮೆಹ್ತಾ ಅವರು ಪುರಸಭೆಗೆ ಸೇರಿದ 6X19 ಅಡಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸುವಂತೆ 2022ರ ನವೆಂಬರ್ 9ರಂದು ತೀರ್ಮಾನಿಸಲಾಗಿತ್ತು. ಆದರೂ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.
ನಾಲೆಗೆ ತಡೆಗೋಡೆ ನಿರ್ಮಿಸಿ: ಸದಸ್ಯ ಚಂದ್ರು ಮಾತನಾಡಿ, ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ವಿಶ್ವೇಶ್ವರಯ್ಯ ನಾಲೆಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಒತ್ತಾಯಿಸಲಾಗಿತ್ತದರೂ, ಇವರೆಗೆ ಕ್ರಮವಹಿಸಿಲ್ಲ. ಶಾಲಾ ಮಕ್ಕಳು ಸೇರಿ ನೂರಾರು ಜನ ನಿತ್ಯ ನಾಲೆ ಏರಿ ಮೇಲೆ ಓಡಾಡುತ್ತಾರೆ. ಕೂಡಲೇ ಕ್ರಮಕೈಗೊಳ್ಳಬೇಕು. ಮಹಾತ್ಮಗಾಂಧಿ ಬಡಾವಣೆಯ ಎ.ಬಿ.ಸಿ.ಬ್ಲಾಕ್‌ಗಳನ್ನು ಸರ್ವೇ ಮಾಡಿಸಿ ಅಲೆಮಾರಿ (ಹಂದಿಜೋಗಿ) ಜನಾಂಗದವರಿಗೆ ತಕ್ಷಣ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಸಭೆ ಬಹಿಷ್ಕರಿಸಿದ ಸದಸ್ಯರು: ಪುರಸಭೆ ಅಧಿಕಾರಿಗಳು ಸದಸ್ಯರು ಮಾತಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾದ ಈ ಹಿಂದಿನ ನಡಾವಳಿಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿ ಸದಸ್ಯರಾದ ಶಿವಕುಮಾರ್ ಮತ್ತು ಪಾರ್ಥಸಾರಥಿ ಸಭೆ ಬಹಿಷ್ಕರಿಸಿ ಹೊರ ನಡೆದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಮುಖ್ಯಾಧಿಕಾರಿ ಸತೀಶ್ ಕುಮಾರ್ ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.