
ಕಾರ್ಯಕ್ರಮದಲ್ಲಿ ಶಾಸಕ ನರೇಂದ್ರಸ್ವಾಮಿ ಅವರನ್ನು ಸನ್ಮಾನಿಸಲಾಯಿತು
ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ A+ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ ₹50 ಸಾವಿರ ನಗದು ಬಹುಮಾನ ನೀಡಿ ಅಭಿನಂದಿಸುತ್ತೇನೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವತಿಯಿಂದ ಶನಿವಾರ ಏರ್ಪಡಿಸಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ "ಸ್ಫೂರ್ತಿ ಸಿಂಚನ" ಪರೀಕ್ಷಾ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಳವಳ್ಳಿ ಶಾಲೆಗಳಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದರು.
ಉದ್ಯಮಗಳು ಶಿಕ್ಷಣದ ಜೊತೆಗೆ ಕೌಶಲ ಹೊಂದಿದ ಕಾರ್ಮಿಕರನ್ನು ಬಯಸುತ್ತಿವೆ. ನೀವು ಉತ್ತಮ ಅಂಕಗಳನ್ನು ಪಡೆಯದಿದ್ದರೆ ನಿರ್ದಿಷ್ಟ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಬುದ್ಧಿವಂತಿಕೆಯ ಮಾನದಂಡ ಅಳೆಯುವುದು ಎಸ್.ಎಸ್.ಎಲ್.ಸಿ. ಪರೀಕ್ಷೆ. ಒಂದು ತಿಂಗಳಲ್ಲಿ ದೊಡ್ಡ ಜವಾಬ್ದಾರಿ ಎದುರಿಸುತ್ತಿದ್ದೀರಿ. ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ಸಲಹೆ ನೀಡಿದರು.
ಮಳವಳ್ಳಿ ತಾಲ್ಲೂಕಿನಲ್ಲಿ 39 ಮಲ್ಟಿ ಮೀಡಿಯಾ ಸೆಂಟರ್ ಆರಂಭವಾಗಲಿವೆ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು.
ನೀವು ಉನ್ನತ ಶಿಕ್ಷಣ ಪಡೆದು, ಭವ್ಯ ಭಾರತದ ನಿರ್ಮಾತೃಗಳಾಗಿ. ಶಿಕ್ಷಕರಲ್ಲಿ ಹತ್ತಾರು ಸಂಘಟನೆಗಳಾಗಿವೆ. ರಾಜಕಾರಣ, ಗುಂಪುಗಾರಿಕೆ ಬಿಟ್ಟು ಉತ್ತಮ ಬೋಧನೆ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.