ADVERTISEMENT

ಮಂಡ್ಯ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಳ: ಬೆಟ್ಟಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 12:12 IST
Last Updated 19 ಏಪ್ರಿಲ್ 2019, 12:12 IST
ಅಂಬರೀಷ್‌ ಪುತ್ರ ಅಭಿಷೇಕ್‌ ಗೌಡ ಶುಕ್ರವಾರ ಮಂಡ್ಯಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿದರು
ಅಂಬರೀಷ್‌ ಪುತ್ರ ಅಭಿಷೇಕ್‌ ಗೌಡ ಶುಕ್ರವಾರ ಮಂಡ್ಯಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿದರು   

ಮಂಡ್ಯ: ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರದ ಮತದಾನದ ಪ್ರಮಾಣ ಶೇ 80 ಮೀರಿದ್ದು ಇದು ಕ್ಷೇತ್ರದಾದ್ಯಂತ ಚರ್ಚೆಯ ವಸ್ತುವಾಗಿದೆ. ಮತದಾನ ಮುಗಿಯುತ್ತಿದ್ದಂತೆ ಸೋಲು–ಗೆಲುವಿನ ಬೆಟ್ಟಿಂಗ್‌ ಆರಂಭಗೊಂಡಿದ್ದು ಕುತೂಹಲ ಕೆರಳಿಸಿದೆ.

ಜಿಲ್ಲಾಡಳಿತದ ಮತದಾನ ಜಾಗೃತಿ ಕಾರ್ಯಕ್ರಮಗಳಿಗಿಂತಲೂ ಅಬ್ಬರದ ಪ್ರಚಾರವೇ ಮತದಾನದ ಹೆಚ್ಚಳಕ್ಕೆ ಕಾರಣ. ಮಂಡ್ಯ ಕ್ಷೇತ್ರ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದಿದ್ದ ಕಾರಣ ಬೆಂಗಳೂರು ಸೇರಿ ವಿವಿಧ ನಗರಗಳಿಗೆ ವಲಸೆ ಹೋಗಿದ್ದವರೆಲ್ಲರೂ ಊರಿಗೆ ಬಂದು ವೋಟು ಹಾಕಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಪಾಂಡವಪುರ ರೈಲು ನಿಲ್ದಾಣ ಗುರುವಾರ ತುಂಬಿ ತುಳುಕುತ್ತಿತ್ತು. ಬೆಂಗಳೂರು–ನಾಗಮಂಗಲ, ಬೆಂಗಳೂರು– ಕೆ.ಆರ್‌.ಪೇಟೆ ನಡುವೆ ಹಲವು ಖಾಸಗಿ ಬಸ್‌ಗಳು ಸಂಚಾರ ನಡೆಸಿವೆ.

ಜೊತೆಗೆ ಮುಂಬೈನಲ್ಲಿ ನೆಲಸಿರುವ 4,500 ಜನರು ತಂತಮ್ಮ ಊರುಗಳಿಗೆ ಬಂದು ಮತ ಹಾಕಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಪ್ರಾಯೋಜಕತ್ವದಲ್ಲಿ ಮುಂಬೈನಿಂದ ನೂರಾರು ಬಸ್‌ಗಳು ಸಂಚಾರ ಮಾಡಿವೆ ಎಂಬ ಮಾಹಿತಿ ಇದೆ. ಮತದಾನದ ಹಿಂದಿನ ದಿನ ಸುಮಲತಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮುಂಬೈನಿಂದ ಬರುತ್ತಿರುವ ಮತದಾರರಿಗೆ ಸ್ವಾಗತ ಕೋರಿ ಸಂದೇಶ ಹಾಕಿದ್ದರು. ಹೀಗಾಗಿ ಊರಿಗೆ ಬಂದು ಮತ ಹಾಕಿದ ವಲಸಿಗರು ಯಾರಿಗೆ ಮತ ಹಾಕಿರಬಹುದು ಎಂಬ ವಿಷಯ ಸ್ಥಳೀಯರ ಚರ್ಚೆಗೆ ಕಾರಣವಾಗಿದೆ.

ADVERTISEMENT

ಜನರ ಚರ್ಚೆಯು ಬೆಟ್ಟಿಂಗ್ ರೂಪ ತಾಳುತ್ತಿದ್ದು ವಿವಿಧೆಡೆ ಲಕ್ಷಾಂತರ ರೂಪಾಯಿ ಹಣ ಕಟ್ಟಿದ್ದಾರೆ. ಮಂಡ್ಯ ತಾಲ್ಲೂಕು ಪಣಕನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಸುಮಲತಾ ಪರ ₹ 1 ಲಕ್ಷ ಹಣ ಕಟ್ಟಿದ್ದಾರೆ. ಜಕ್ಕನಹಳ್ಳಿಯ ರೈತರೊಬ್ಬರು ನಿಖಿಲ್‌ ಗೆಲುವಿಗಾಗಿ ₹ 80 ಸಾವಿರ ಕಟ್ಟಿದ್ದಾರೆ ಎಂಬ ವಿಷಯಗಳು ಹರಿದಾಡುತ್ತಿವೆ.

ಮಂಡ್ಯದಲ್ಲಿ ಶಾಂತಿ

ಕಳೆದೊಂದು ತಿಂಗಳಿಂದ ಅಬ್ಬರದ ಪ್ರಚಾರಕ್ಕೆ ಕಾರಣವಾಗಿದ್ದ ಕ್ಷೇತ್ರದಲ್ಲಿ ಶುಕ್ರವಾರ ಶಾಂತಿ ನೆಲೆಸಿತ್ತು. ಗುರುವಾರ ರಾತ್ರಿ ಮಳೆಯೂ ಸುರಿದ ಕಾರಣ ಮಂಡ್ಯ ತಣ್ಣಗಾಗಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ಮೂಲೆ ಮೂಲೆ ಸುತ್ತಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಶುಕ್ರವಾರ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆದರು. ಕಾಲು ನೋವು ಅನುಭವಿಸುತ್ತಿದ್ದ ಅವರು ಮನೆಯಲ್ಲೇ ಉಳಿದರು. ಮೈತ್ರಿ ಅಭ್ಯರ್ಥಿ ನಿಖಿಲ್‌ ಬೆಂಗಳೂರಿಗೆ ಮರಳಿದ್ದು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ.

ಜನರ ಜೊತೆ ಟೀ ಕುಡಿದ ಅಭಿಷೇಕ್‌

ಚುನಾವಣೆಯ ನಂತರ ಏ. 19ರಂದು ಸುಮಲತಾ ಹಾಗೂ ನಿಖಿಲ್‌ ಸಿಂಗಪುರಕ್ಕೆ ತೆರಳುತ್ತಾರೆ ಎಂದು ಬಿಂಬಿಸಲಾಗಿತ್ತು. ಸಿಂಗಪುರಕ್ಕೆ ಕಾಯ್ದಿರಿಸಿದ ಟಿಕೆಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಅಭಿಷೇಕ್‌ ಶುಕ್ರವಾರ ಮಂಡ್ಯ ನಗರಕ್ಕೆ ಭೇಟಿ ನೀಡುವ ಮೂಲಕ, ತಾವು ಎಲ್ಲೂ ಹೋಗಿಲ್ಲ, ಜನರ ನಡುವೆಯೇ ಇದ್ದೇವೆ ಎಂಬ ಸಂದೇಶ ನೀಡಿದರು. ಮಹಾವೀರ ಸರ್ಕಲ್‌ನಲ್ಲಿ ಜನರ ಜೊತೆ ಟೀ ಕುಡಿದು ಮತದಾರರಿಗೆ ಧನ್ಯವಾದ ಹೇಳಿದರು.

‘ಚುನಾವಣೆ ಮುಗಿದ ಮೇಲೂ ಮಂಡ್ಯಕ್ಕೆ ಬರುವುದಾಗಿ ತಿಳಿಸಿದ್ದೆ. ಅದರಂತೆ ನಾನು ಬಂದಿದ್ದೇನೆ. ಕೆಲವರು ನಾವು ಸಿಂಗಪುರಕ್ಕೆ ತೆರಳುತ್ತಿದ್ದೇವೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ನಾವು ಜನರ ಜೊತೆಯಲ್ಲೇ ಇದ್ದೇವೆ’ ಎಂದರು.

ಇಂದು ನಿಖಿಲ್‌ ದುಬೈಗೆ?

ನಿಖಿಲ್‌ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಶನಿವಾರ ದುಬೈಗೆ ತೆರಳುತ್ತಾರೆ. ಅದಕ್ಕಾಗಿ ಕಾಯ್ದಿರಿಸಿದ್ದಾರೆ ಎನ್ನಲಾದ ವಿಮಾನ ಟಿಕೆಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ನಿಖಿಲ್‌, ಸಂಸದರು, ಮಂಡ್ಯ ಕ್ಷೇತ್ರ’ ಎಂಬ ಬರಹವುಳ್ಳ ಫಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದು ಜೆಡಿಎಸ್‌ ಮುಖಂಡರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.