ADVERTISEMENT

ನಾಯಿಕೊಡೆಯಂತೆ ತಲೆಎತ್ತಿದ ಬೇಸಿಗೆ ಶಿಬಿರಗಳು

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಫೂರ್ತಿ ತುಂಬುವ ತರಬೇತಿ ಇಲ್ಲ, ಹೆಚ್ಚು ದರ ನಿಗದಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 10:04 IST
Last Updated 23 ಏಪ್ರಿಲ್ 2019, 10:04 IST
ಮಂಡ್ಯದ ಬಾಲಭವನದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಕಲಾವಿದೆ ಮಂಜುಳಾ ಮಕ್ಕಳಿಗೆ ಗಾಯನ ತರಬೇತಿ ನೀಡುತ್ತಿರುವುದು
ಮಂಡ್ಯದ ಬಾಲಭವನದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಕಲಾವಿದೆ ಮಂಜುಳಾ ಮಕ್ಕಳಿಗೆ ಗಾಯನ ತರಬೇತಿ ನೀಡುತ್ತಿರುವುದು   

ಮಂಡ್ಯ: ನಗರದ ವಿವಿಧೆಡೆ ನಾಯಿಕೊಡೆಯಂತೆ ಬೇಸಿಗೆ ಶಿಬಿರಗಳು ತಲೆ ಎತ್ತಿವೆ. ಆದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಫೂರ್ತಿ ತುಂಬುವ ಶಿಬಿರಗಳ ಕೊರತೆಯಿಂದಾಗಿ ಪೋಷಕರಿಗೆ ಆಯ್ಕೆ ಸಮಸ್ಯೆ ಎದುರಾಗಿದೆ.

ಎಲ್ಲಾ ಸಮರಕಲೆಗಳನ್ನು ಒಂದೇ ಸೂರಿನಡಿ ತರಬೇತಿ ನೀಡುವ ಮೈಸೂರು ರಂಗಾಯಣದಂತಹ ‘ಚಿಣ್ಣರ ಮೇಳ’ ಬೇಸಿಗೆ ಶಿಬಿರ ನಗರದಲ್ಲಿ ನಡೆಯುತ್ತಿಲ್ಲ. ನಾಟಕ, ನೃತ್ಯ, ಸಂಗೀತ, ಆಟ, ಜನಪದ ಕಲೆಗಳ ತರಬೇತಿ ನೀಡುವ ಶಿಬಿರಗಳು ಇಲ್ಲಿ ಸಿಗುತ್ತಿಲ್ಲ. ತರಬೇತಿ ಪಡೆದ ತರಬೇತುದಾರರೂ ಇಲ್ಲ. ಕೆಲವು ಖಾಸಗಿ ಶಾಲೆಗಳು ಆವರಣದಲ್ಲಿರುವ ಈಜುಕೊಳದಲ್ಲಿ ಈಜು ತರಬೇತಿ ನೀಡುವುದಕ್ಕಾಗಿಯೇ ಬೇಸಿಗೆ ಶಿಬಿರ ಆಯೋಜಿಸಿವೆ. ಜೊತೆಗೆ ಶಿಬಿರದ ಕೊನೆಯಲ್ಲಿ ಒಂದು ದಿನದ ಪ್ರವಾಸ ಆಯೋಜನೆ ಮಾಡಿವೆ. ಅದಕ್ಕಾಗಿ ₹ 2–3 ಸಾವಿರ ಹಣ ವಸೂಲಿ ಮಾಡುತ್ತಿವೆ.

ನಗರದಲ್ಲಿರುವ ಎಲ್ಲಾ ನೃತ್ಯ ಶಾಲೆಗಳು ಬೇಸಿಗೆ ಶಿಬಿರ ಆಯೋಜಿಸಿವೆ. ಇಲ್ಲಿ ನಿತ್ಯವೂ ನೃತ್ಯ ತರಬೇತಿ ನಡೆಯುತ್ತದೆ. 20 ದಿನಗಳ ನೃತ್ಯ ತರಬೇತಿ ಆಯೋಜಿಸಿ ಅಧಿಕ ದರ ವಸೂಲಿ ಮಾಡುತ್ತಿವೆ. ಪ್ರಿ–ನರ್ಸರಿ ಶಾಲೆ ನಡೆಸುವ ಸಂಸ್ಥೆಗಳೂ ಬೇಸಿಗೆ ಶಿಬಿರ ಆಯೋಜಿಸಿದ್ದು ಮಕ್ಕಳಿಗೆ ಉಪಯೋಗವಾಗುವಂತಹ ಯಾವುದೇ ತರಬೇತಿ ನೀಡುತ್ತಿಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಕ್ಕಳನ್ನು ನೋಡಿಕೊಳ್ಳುವುದಕ್ಕಷ್ಟೇ ಬೇಸಿಗೆ ಶಿಬಿರ ಸೀಮಿತವಾಗಿವೆ. ಕರಪತ್ರ ಹಂಚಿರುವ ಸಂಸ್ಥೆಗಳು ಹಲವು ತರಬೇತಿ ನೀಡುವುದಾಗಿ ಘೋಷಣೆಮಾಡಿಕೊಂಡಿವೆ. ಆದರೆ ಸ್ಥಳಕ್ಕೆ ತೆರಳಿ ನೋಡಿದರೆ, ಯಾವುದೇ ತರಬೇತಿ ಇಲ್ಲದೆ ಸುಮ್ಮನೆ ಮಕ್ಕಳನ್ನು ಕೂಡಿಹಾಕಿಕೊಂಡಿವೆ.

ADVERTISEMENT

‘ನಾವು ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂದೊಡನೆ ಅಜ್ಜ– ಅಜ್ಜಿಯ ಮನೆಗೆ ತೆರಳಿ ಗ್ರಾಮೀಣ ಆಟವಾಡುತ್ತಿದ್ದೆವು. ರಜೆ ಮುಗಿದು ಮತ್ತೆ ಶಾಲೆ ಆರಂಭವಾಗುವಷ್ಟರಲ್ಲಿ ಹಳ್ಳಿ ಜೀವನದಿಂದ ಮಾನಸಿಕವಾಗಿ ಗಟ್ಟಿಯಾಗುತ್ತಿದ್ದೆವು. ಆದರೆ ಈಗ ಪೋಷಕರು ಮಕ್ಕಳನ್ನು ಹಳ್ಳಿಗೆ ಕಳುಹಿಸುವುದಿಲ್ಲ. ಮಕ್ಕಳ ಚರ್ಮದ ಬಣ್ಣ ಕಪ್ಪಾಗುತ್ತದೆ ಎಂಬ ಕಾರಣಕ್ಕೆ ಬೇಸಿಗೆ ಶಿಬಿರಗಳಿಗೆ ಕಳುಹಿಸುತ್ತಾರೆ. ಆದರೆ ಶಿಬಿರಗಳಲ್ಲಿ ಮಕ್ಕಳಿಗೆ ಯಾವುದೇ ಅನುಭವ ಸಿಗುವುದಿಲ್ಲ. ಶಾಲೆಗೂ, ಬೇಸಿಗೆ ಶಿಬಿರಕ್ಕೂ ಯಾವುದೇ ವ್ಯತ್ಯಾಸವಿಲ್ಲ’ ಎಂದು ಎಂದು ಮಕ್ಕಳ ತಜ್ಞರಾದ ಡಾ.ಸುಭಾಷ್‌ ಹೇಳಿದರು.

ಕೆಲವೆಡೆ ಉತ್ತಮ ತರಬೇತಿ: ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಮಕ್ಕಳಿಗೆ ಉತ್ತಮ ತರಬೇತಿ ದೊರೆಯುತ್ತಿದೆ. ಕಲಾತಪಸ್ವಿ ಟ್ರಸ್ಟ್‌ ಚಿತ್ರಕಲಾ ಶಿಬಿರ ಆಯೋಜನೆ ಮಾಡಿದ್ದು ಕೇವಲ 30 ಮಕ್ಕಳನ್ನು ದಾಖಲು ಮಾಡಿಕೊಂಡಿದೆ. ವೃತ್ತಿಪರವಾಗಿ ತರಬೇತಿ ಪಡೆದ ಕಲಾ ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ. ಸಂಸ್ಥೆ ಅನಾವಶ್ಯಕವಾಗಿ ಹೆಚ್ಚು ಮಕ್ಕಳನ್ನು ದಾಖಲು ಮಾಡಿಕೊಂಡಿಲ್ಲ. ಪ್ರತಿ ಮಗುವಿಗೆ ₹ 1,200– ₹ 2000ವರೆಗೆ ದರ ನಿಗದಿ ಮಾಡಿದ್ದಾರೆ. ತರಬೇತಿಯ ಕೊನೆಯಲ್ಲಿ ಟ್ರಸ್ಟ್‌ ಮಕ್ಕಳಿಗೆ ಪ್ರಮಾಣಪತ್ರ ವಿತರಣೆ ಮಾಡಲಿದೆ.

‘ಪೋಷಕರ ಒತ್ತಾಯದ ಮೇರೆಗೆ ನಾವು ಬೇಸಿಗೆ ಶಿಬಿರ ಆಯೋಜನೆ ಮಾಡಿದ್ದೇವೆ. ನಮ್ಮ ಸಂಸ್ಥೆಯಲ್ಲಿ ವರ್ಷಪೂರ್ತಿ ಡ್ರಾಯಿಂಗ್‌, ಪೇಂಟಿಂಗ್‌ ತರಬೇತಿ ನಡೆಯುತ್ತದೆ. ಬೇಸಿಗೆ ರಜೆ ಅಂಗವಾಗಿ ಕೇವಲ 30 ಮಕ್ಕಳನ್ನು ದಾಖಲು ಮಾಡಿಕೊಂಡು ಪೇಂಟಿಂಗ್‌ ತರಬೇತಿ ನೀಡುತ್ತಿದ್ದೇವೆ’ ಎಂದು ಕಲಾ ತಪಸ್ವಿ ಟ್ರಸ್ಟ್‌ನ ಕಲಾವಿದ ಎಸ್‌.ಬಿ.ಅನಿಲ್‌ ಕುಮಾರ್‌ ಹೇಳಿದರು.

ನಗರದ ಜನತಾ ಶಿಕ್ಷಣ ಸಂಸ್ಥೆ ವತಿಯಿಂದ ಪಿಇಟಿ ಕ್ರೀಡಾ ಸಮುಚ್ಛಯದಲ್ಲಿ ವೈವಿಧ್ಯಮಯ ಆಟೋಟ ಶಿಬಿರ ಆಯೋಜನೆ ಮಾಡಲಾಗಿದೆ. ಪಿಇಟಿ ಈಜುಕೊಳದಲ್ಲಿ ಮಕ್ಕಳಿಗೆ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ವಿವಿಧ ಬ್ಯಾಚ್‌ಗಳಲ್ಲಿ ಈಜು ತರಬೇತಿ ನಡೆಯುತ್ತಿವೆ. ಈಜು ಮಾತ್ರವಲ್ಲದೆ ಬಾಲ್‌ ಬ್ಯಾಡ್ಮಿಂಟನ್‌ ಶಿಬಿರ ತಿಂಗಳ ಪೂರ್ತಿ ನಡೆಯುತ್ತಿದೆ. ಜೊತೆಗೆ ಷಟಲ್‌ ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ವಾಲಿಬಾಲ್‌, ಕೊಕ್ಕೊ ಶಿಬಿರಗಳು ನಡೆಯುತ್ತಿವೆ. ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಕೋಚ್‌ ನೇಮಕ ಮಾಡಿದ್ದು ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. 7 ವರ್ಷದಿಂದ 14 ವರ್ಷ ವಯಸ್ಸಿನೊಳಗಿನ ಮಕ್ಕಳು ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ.

************

ಬಾಲಭವನದಲ್ಲಿ ಉಚಿತ ಬೇಸಿಗೆ ಶಿಬಿರ
ಎಲ್ಲಾ ವರ್ಗದ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೆಳೆಯಲು ಸರ್ಕಾರವೇ ಕಳೆದ ಮೂರು ವರ್ಷಗಳಿಂದ ಬೇಸಿಗೆ ಶಿಬಿರ ಆಯೋಜನೆ ಮಾಡುತ್ತಾ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಬಾಲಭವನದಲ್ಲಿ 20 ದಿನಗಳ ಉಚಿತ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದೆ.

ಶಿಬಿರದಲ್ಲಿ 130 ಮಕ್ಕಳು ಭಾಗವಹಿಸಿವೆ. ಪ್ರತಿದಿನ ಒಂದೊಂದು ವಿಷಯ ತಜ್ಞರ ತಂಡ ಶಿಬಿರಕ್ಕೆ ಭೇಟಿ ನೀಡಿ ಮಕ್ಕಳಿಗೆ ವಿವಿಧ ವಿಷಯ ಕುರಿತು ತರಬೇತಿ ನೀಡುತ್ತಿದ್ದಾರೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ, ಸಾಹಸ ಕಲಾ ತಂಡದಿಂದ ಸಾಹಸ, ಮುಖವಾಡ ತಯಾರಿಕೆ, ಮಾಟ–ಮಂತ್ರ ರಹಸ್ಯ ಬಯಲು ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.