ADVERTISEMENT

ಕೆಆರ್‌ಎಸ್‌ ತುಂಬಿದ್ದರೂ ಕುಡಿಯುವ ನೀರಿಲ್ಲ

ಜಿಲ್ಲಾ ಪಂಚಾಯಿತಿ ಕೆಡಿಪಿ ಪ್ರಗತಿಪರಿಶೀಲನಾ ಸಭೆ; ಅಧ್ಯಕ್ಷೆ ನಾಗರತ್ನಾ ಸ್ವಾಮಿ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2018, 12:11 IST
Last Updated 16 ಆಗಸ್ಟ್ 2018, 12:11 IST
ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಾಗರತ್ನಾ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಾಗರತ್ನಾ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಮಂಡ್ಯ: ‘ಕೆಆರ್‌ಎಸ್‌ ಜಲಾಶಯ ತುಂಬಿದ್ದು ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಾಲೆಗಳಲ್ಲಿ ನೀರು ಹರಿಯುತ್ತಿದ್ದರೂ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಹಳ್ಳಿ ಜನರಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಾಗಮಂಗಲ ಹಾಗೂ ಕೆ.ಆರ್‌.ಪೇಟೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಾಗಮಂಗಲ ತಾಲ್ಲೂಕಿನ ಬಸವನ ಕೊಪ್ಪಲು, ಹೂವಿನಹಡಗಲಿ, ಶಿಕಾರಿಪುರ, ಶಿವನಹಳ್ಳಿ, ಮೂಡಲಕೊಪ್ಪಲು, ಬುಡುಬುಡುಕೆ ಕಾಲೊನಿ ಮುಂತಾದ ಗ್ರಾಮಗಳಿಗೆ ಈಗಲೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಆರ್‌ಎಸ್‌ ಜಲಾಶಯ ಸಮೀಪದಲ್ಲೇ ಇದ್ದರೂ ಕುಡಿಯುವ ನೀರಿನ ಕೊರತೆ ಇರುವುದು ದುರದೃಷ್ಟಕರ. ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿಯಾಗದ ಕಾರಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶುದ್ಧ ನೀರಿನ ಘಟಕಗಳನ್ನು ರಿಪೇರಿ ಮಾಡಿಸಬೇಕು’ ಎಂದು ಹೇಳಿದರು.

ADVERTISEMENT

ಇದಕ್ಕೆ ಉತ್ತರ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ‘ನಾಗಮಂಗಲ ತಾಲ್ಲೂಕಿನ 14 ಗ್ರಾಮಗಳಲ್ಲಿ ಸಮಸ್ಯೆ ಇತ್ತು. ಎಲ್ಲಾ ಗ್ರಾಮಗಳಲ್ಲೂ ಕೊಳವೆಬಾವಿ ಕೊರೆಸಲಾಯಿತು. ಆದರೆ 7 ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಬಂದಿದ್ದು ಉಳಿದ ಏಳು ಬಾವಿಗಳು ವೈಫಲ್ಯವಾಗಿವೆ. ಹೀಗಾಗಿ 7 ಗ್ರಾಮಗಳಿಗೆ ಈಗಲೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಕೊರತೆಯಾಗಿರುವ ಹಳ್ಳಿಗಳ ಜನವಸತಿ ಸಂಖ್ಯೆ ಪರಿಶೀಲಿಸಿ ಟ್ಯಾಂಕ್‌ ನಿರ್ಮಿಸಲು ಅವಕಾಶವಿದೆ. ಈ ಕುರಿತ ಕಾರ್ಯಯೋಜನೆಗೆ ಹಳ್ಳಿಗಳನ್ನು ಸೇರ್ಪಡೆ ಮಾಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಮಾತನಾಡಿ ‘ಶುದ್ಧ ಕುಡಿಯುವ ನೀರಿನ ಘಟಕದಲ್ಲಿರುವ ಗಡಸು ನೀರು ಸಂಗ್ರಹ ಟ್ಯಾಂಕ್‌ ಪ್ಲಾಸ್ಟಿಕ್‌ನಿಂದ ಮಾಡಿದ್ದು ನೀರಿನ ಶುದ್ಧತೆ ಹಾಳಾಗುತ್ತಿದೆ. ಪಾಚಿ ಕಟ್ಟಿಕೊಳ್ಳುವ ಕಾರಣ ದುರ್ವಾಸನೆ ಉಂಟಾಗುತ್ತಿದೆ’ ಎಂದರು. ‘ಹೊಸದಾಗಿ ನಿರ್ಮಿಸುತ್ತಿರುವ ಘಟಕದಲ್ಲಿ ಸ್ಟೀಲ್‌ ಟ್ಯಾಂಕ್‌ ಅಳವಡಿಸಲಾಗುತ್ತಿದೆ’ ಎಂದು ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಕೆ.ಮಂಜು ಮಾತನಾಡಿ ‘ಕೃಷಿ ಇಲಾಖೆ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಕೃಷಿ ಅಭಿಯಾನ ಆಚರಣೆ ಮಾಡುತ್ತಿದ್ದಾರೆ. ಆದರೆ ರೈತರಿಗೆ ಮಾಹಿತಿ ನೀಡಲು ಯಾವುದೇ ಅಧಿಕಾರಿಗಳು ಬರುತ್ತಿಲ್ಲ. ಕಾರ್ಯಕ್ರಮ ಕೇವಲ ಉದ್ಘಾಟನೆಗಷ್ಟೇ ಸೀಮಿತಗೊಳ್ಳುತ್ತದೆ. ಈ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಲು ಕೃಷಿ, ಅರಣ್ಯ, ಪಶು ಸಂಗೋಪನೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಾಗಬೇಕು’ ಎಂದು ಒತ್ತಾಯಿಸಿದರು.

ಹಸಿರು ಕರ್ನಾಟಕ; 34 ಹಳ್ಳಿಗಳ ಆಯ್ಕೆ:
‘ರಾಜ್ಯದಲ್ಲಿ ಅರಣ್ಯದ ಪ್ರಮಾಣ ಹೆಚ್ಚಿಸಲು ಮುಖ್ಯಮಂತ್ರಿಗಳು ಹಸಿರು ಕರ್ನಾಟಕ ಯೋಜನೆ ಜಾರಿಗೊಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಯೋಜನೆ ಉದ್ಘಾಟನೆಗೊಂಡಿದೆ. ಪ್ರಥಮ ಹಂತಕ್ಕೆ ಜಿಲ್ಲೆಯಲ್ಲಿ 34 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಮನೆಯ ಮುಂದೆ ಕನಿಷ್ಠ 1 ಸಸಿಯನ್ನಾದರೂ ನೆಟ್ಟು ಬೆಳೆಸುವ ಉದ್ದೇಶವನ್ನು ಈ ಯೋಜನೆ ಮೂಲಕ ಹೊಂದಲಾಗಿದೆ’ ಎಂದು ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಕಾಶ್‌, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಸಿಇಒ ಕೆ.ಯಾಲಕ್ಕಿಗೌಡ, ಉಪ ಕಾರ್ಯದರ್ಶಿ ಡಾ.ಕೃಷ್ಣರಾಜು ಹಾಜರಿದ್ದರು.

*****************

‘ಯಶೋಗಾಥೆ’ಗೆ ₹ 5 ಲಕ್ಷ!

‘ಗ್ರಾಮ ಪಂಚಾಯಿತಿ ಯಾವುದೇ ಉತ್ತಮ ಕೆಲಸ ಮಾಡಿದರೆ ಆ ಪಂಚಾಯಿತಿಗೆ ಸರ್ಕಾರ ₹ 5 ಲಕ್ಷ ನೀಡುವ ಯಶೋಗಾಥೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡು ವೈನ್‌ ಶಾಪ್‌ ತೆರವು, ಅರಣ್ಯ ಒತ್ತುವರಿ ತೆರವು ಮುಂತಾದ ಕೆಲಸ ಮಾಡಬೇಕು. ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಜಾರಿಗೊಳಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.

ಇಲಾಖೆ ಮುಖ್ಯಸ್ಥರ ಗೈರು: ಎಚ್ಚರಿಕೆ

‘ಮುಂದಿನ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ಎಲ್ಲಾ ಇಲಾಖೆಗಳ ಮುಖ್ಯ ಅಧಿಕಾರಿಗಳು ತಪ್ಪದೇ ಬರಬೇಕು. ತಪ್ಪಿದ್ದಲ್ಲಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗುವುದು. ಅಷ್ಟೇ ಅಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುವುದು. ಸಭೆಗೆ ಕಿರಿಯ ಅಧಿಕಾರಿಗಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ಸಭೆಗೆ ಯಾವುದೇ ಮಾಹಿತಿ ದೊರೆಯುತ್ತಿಲ್ಲ’ ಎಂದು ಸಿಇಒ ಯಾಲಕ್ಕಿಗೌಡ ಹೇಳಿದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ

‘ಪ್ರಗತಿ ಪರಿಶೀಲನೆ ಸಭೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಸಭೆಯ ವಿಷಯಗಳ ಕಿರು ಹೊತ್ತಿಗೆಯನ್ನೂ ಕೊಟ್ಟಿಲ್ಲ. ಹೀಗಾಗಿ ಸಭೆಯಲ್ಲಿ ಚರ್ಚೆ ನಡೆಸಬೇಕಾದ ವಿಷಯಗಳ ಬಗ್ಗೆ ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಕೆ.ಮಂಜು ಅಸಮಾಧಾನ ವ್ಯಕ್ತಪಡಿಸಿದರು. ‘ಮುಂದಿನ ಸಭೆಗೆ ಒಂದು ವಾರ ಮುಂಚೆಯೇ ಮಾಹಿತಿ ನೀಡಬೇಕು. ಚರ್ಚೆಯ ವಿಷಯಗಳ ಹೊತ್ತಿಗೆಯನ್ನು ಮೊದಲೇ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.