ಮಳವಳ್ಳಿ: ‘ರೈತರು ಸಂಪ್ರದಾಯ ಬೆಳೆ ಬೆಳೆಯುವುದನ್ನು ಬಿಟ್ಟು ಆಧುನಿಕ ಕೃಷಿ ಪದ್ಧತಿ ಬೆಳೆ ಬೆಳೆಯುವುದು ಮುಖ್ಯವಾಗಬೇಕು’ ಎಂದು ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ದಿ ಇಲಾಖೆ ನಿರ್ದೇಶಕಿ ಎಸ್.ಎಂ.ರಾಜೇಶ್ವರಿ ತಿಳಿಸಿದರು.
ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ಶನಿವಾರ ನಡೆದ ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತದಲ್ಲಿ ಔಷಧೀಯ ಗಿಡಮೂಲಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾವಯವದಲ್ಲಿಯೂ ಬೆಳೆದು ಹೆಚ್ಚು ಲಾಭ ಗಳಿಸಿಕೊಳ್ಳಬಹುದು. ಮಂಡ್ಯ ಜಿಲ್ಲೆಯಲ್ಲಿ ಬೆಳೆಯುವ ತುಳುಸಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ತಿಳಿದುಕೊಳ್ಳಬೇಕು. ರೈತರು ಸಂಪ್ರದಾಯಕ ಬೆಳೆ ಕಬ್ಬು ಭತ್ತ ರಾಗಿಗೆ ಸೀಮಿತವಾಗುವ ಜೊತೆಗೆ ಹೆಚ್ಚು ವಾಣಿಜ್ಯ ಉದ್ದೇಶದ ಬೆಳೆ ಬೆಳೆಯಿರಿ ಎಂದು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ದಿ ಇಲಾಖೆ ವತಿಯಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೈತರು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ, ರೈತರು ಹಾಗೂ ಮಹಿಳೆಯರು ಸ್ವಸಹಾಯ ಸಂಘ ಹಾಗೂ ಒಕ್ಕೂಟಗಳನ್ನು ಸ್ಥಾಪಿಸಿಕೊಂಡು ಇಲಾಖೆ ನೀಡುವ ತರಬೇತಿಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದರು.
ಸಂಪೂರ್ಣ ಸಾವಯವ ಕೃಷಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ವಿಷಮುಕ್ತ ಆಹಾರ ಸೇವನೆಗೆ ಒತ್ತು ನೀಡುವ ಉದ್ದೇಶದಿಂದ ಸಾವಯವ ಕೃಷಿಕ ಸಂಘವನ್ನು ಸ್ಥಾಪಿಸಿ ಪ್ರತಿ ತಿಂಗಳು ಎರಡನೇ ಶನಿವಾರ ಪ್ರಗತಿಪರ ರೈತರ ಜಮೀನಿನಲ್ಲಿ ಸಭೆ ನಡೆಸಿ ರೈತರಿಗೆ ತಿಳವಳಿಕೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಾಂತರಾಜು, ಮುಖಂಡರಾದ ಚಿಕ್ಕಣ್ಣ, ಕಾರಸವಾಡಿ ಮಹದೇವ, ಸತ್ಯಮೂರ್ತಿ, ಕೇಶವಮೂರ್ತಿ ಭಾಗವಹಿಸಿದ್ದರು.
ಯೋಜನೆ ಮಹತ್ವ ತಿಳಿದುಕೊಳ್ಳಿ
ಕೇಂದ್ರದಿಂದ ಹಿಡಿದು ಗ್ರಾಮ ಪಂಚಾಯಿತಿವರೆಗೂ ಸರ್ಕಾರದ ಸೌಲಭ್ಯ ಬಳಸಿಕೊಳ್ಳುವಂತೆ ತಿಳವಳಿಕೆ ನೀಡಲು ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗಿದ್ದು, ಅವರು ಸಂಘಗಳ ಸ್ಥಾಪನೆ, ತರಬೇತಿ ಸೇರಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವರು ಎಂದು ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ದಿ ಇಲಾಖೆ ನಿರ್ದೇಶಕಿ ಎಸ್.ಎಂ.ರಾಜೇಶ್ವರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.