ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಹೋಬಳಿಯ ಮೊಗರಹಳ್ಳಿಯಲ್ಲಿ, ಸರ್ಕಾರಿ ಬೀಳು ಜಾಗದಲ್ಲಿ ಕಟ್ಟಿಕೊಂಡಿರುವ 300 ಮನೆಗಳಿಗೆ ಒಂದು ತಿಂಗಳ ಒಳಗಾಗಿ ಇ– ಖಾತೆ ಮಾಡಿಕೊಡುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಹೊಸಹಳ್ಳಿ ಗ್ರಾ.ಪಂ ಕಚೇರಿಯಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಸೋಮವಾರ ಚರ್ಚಿಸಿದ ಅವರು, ‘ವಿಳಂಬ ಮಾಡಿದೆ ಮೊಗರಹಳ್ಳಿಯಲ್ಲಿರುವ ಮನೆಗಳಿಗೆ ಇ– ಖಾತೆ ಮಾಡಿಕೊಡಬೇಕು. ಖಾತೆ ಮಾಡಿಕೊಟ್ಟ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದರು.
‘ಕೃಷಿ, ಕಟ್ಟಡ ಮತ್ತು ವಿವಿಧ ಕೂಲಿ ಕೆಲಸ ಮಾಡುವ 300 ಕುಟುಂಬಗಳು ಕಳೆದ 40 ವರ್ಷಗಳಿಂದ ಮೊಗರಹಳ್ಳಿಯಲ್ಲಿ ಬೀಳು ಬಿದ್ದಿದ್ದ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಈ ಮನೆಗಳಿಗೆ ಅಧಿಕೃತ ಖಾತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಮೂರೂವರೆ ಎಕರೆ ಸರ್ಕಾರಿ ಬೀಳು ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು, ಅಧಿಕೃತ ದಾಖಲೆ ಇಲ್ಲದೆ ಬವಣೆ ಪಡುತ್ತಿದ್ದಾರೆ. ಮನೆಗಳನ್ನು ನಿರ್ಮಿಸಿಕೊಂಡು ಕಾಯಂ ಆಗಿ ವಾಸಿಸುತ್ತಿರುವವರನ್ನು ಆಯಾ ಮನೆಗಳಿಗೆ ಶಾಶ್ವತ ಹಕ್ಕುದಾರರನ್ನಾಗಿ ಮಾಡಬೇಕು’ ಎಂದು ತಿಳಿಸಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಶಿಕಲಾ ಮಾತನಾಡಿ, ‘ಬೆಳಗೊಳ ಹೋಬಳಿ ಮೊಗರಹಳ್ಳಿಯ ಸ.ನಂ 27 ಪೈಕಿ 1ರಲ್ಲಿ 1.23 ಎಕರೆ ಮತ್ತು ಸ.ನಂ 27 ಪೈಕಿ 2ರಲ್ಲಿ 1.23 ಎಕರೆ ಹಾಗೂ ಸ.ನಂ 92ರಲ್ಲಿ 27 ಗುಂಟೆ ಸರ್ಕಾರಿ ಬೀಳು ಜಮೀನು ಇದ್ದು, ಸದರಿ ಜಾಗದಲ್ಲಿ 300 ಮಂದಿ ಮನೆ ಕಟ್ಟಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದರೂ ಯಾವ ಮನೆಗೂ ಹಕ್ಕುಪತ್ರ ಇರಲಿಲ್ಲ. ಅಷ್ಟೂ ಮನೆಗಳಿಗೆ ಅನುಭವ ಮತ್ತು ಚಕ್ಕುಬಂಧಿ ಪ್ರಕಾರ ಇ– ಸ್ವತ್ತು ಮಾಡಿಕೊಡಲಾಗುವುದು. ಇನ್ನು ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.
‘ಮೊಗರಹಳ್ಳಿ ನಿವಾಸಿಗಳ ಕೋರಿಕೆಯಂತೆ ಶಾಸಕರು, ಸರ್ಕಾರಿ ಬೀಳು ಜಮೀನಿನಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಆದಷ್ಟು ಶೀಘ್ರ ಇ– ಸ್ವತ್ತು ಮಾಡಿಕೊಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಈಗಾಗಲೇ ಪಟ್ಟಿ ತಯಾರಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿ, ಇ– ಖಾತೆ ಮಾಡಿಕೊಟ್ಟು ಆಗಸ್ಟ್ ಅಂತ್ಯದೊಳಗೆ ಫಲಾನುಭವಿಗಳಿಗೆ ಅಧಿಕೃತ ದಾಖಲೆ ವಿತರಿಸಲಾಗುವುದು’ ಎಂದು ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷ ಚಲುವರಾಜು ತಿಳಿಸಿದರು.
‘ಗಡಿ ಗ್ರಾಮವಾದ ಮೊಗರಹಳ್ಳಿಯಲ್ಲಿ ಬಡ ಜನರು ತಮ್ಮ ಶಕ್ತ್ಯಾನುಸಾರ ಸೂರು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಸರ್ಕಾರಿ ಬೀಳು ಜಾಗದಲ್ಲಿ ಮನೆ ಮಟ್ಟಿಕೊಂಡು ವಾಸಿಸುತ್ತಿದ್ದು, ಯಾವ ಮನೆಗಳಿಗೆ ದಾಖಲೆಗಳಿಲ್ಲ. ಇದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಉಂಟುಮಾಡಿತ್ತು. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಖುದ್ದು ಆಸಕ್ತಿ ವಹಿಸಿ ಇ– ಖಾತೆ ವಿತರಣೆಗೆ ಕ್ರಮ ವಹಿಸಿರುವುದು ನೆಮ್ಮದಿ ತಂದಿದೆ’ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.