ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಶುಕ್ರವಾರ ರಾತ್ರಿ ಮಲಾಸಸ್ ಸಂಗ್ರಹಿಸಿದ್ದ ಟ್ಯಾಂಕ್ ಹೊಡೆದು ಸೋರಿಕೆಯಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇದರಿಂದ ಕಾರ್ಖಾನೆಗೆ ಸಾಕಷ್ಟು ನಷ್ಟ ಸಂಭವಿಸಲಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಮಲಾಸ್ ಸೋರಿಕೆಗೆ ಸಮರ್ಪಕವಾದ ಕಾರಣ ತಿಳಿದು ಬಂದಿಲ್ಲ. ಕಬ್ಬಿನ ದೊಡ್ಡ ಟ್ಯಾಂಕ್‌ನ ಮೇಲ್ಮಟ್ಟದಲ್ಲಿ ಹೊಡೆದು ಹೋಗಿ ಮಲಾಸ್ ಸೋರಿಕೆಯಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈಗಾಗಲೇ ಲಕ್ಷಾಂತರ ಟನ್ ಕಬ್ಬು ಅರೆದಿದ್ದು, ಸಕ್ಕರೆ ತಯಾರಿಕೆಗೆ ಟ್ಯಾಂಕ್‌ನಲ್ಲಿ ಮಲಾಸಸ್ ಸಂಗ್ರಹಿಸಲಾಗಿತ್ತು. ಇದೀಗ ಟ್ಯಾಂಕ್ ಹೊಡೆದು ಹೋಗಿರುವುದರಿಂದ ಕಾರ್ಖಾನೆಗೆ ನಷ್ಟವಾಗಲಿದೆ ಎನ್ನಲಾಗಿದೆ.
ಮಲಾಸ್ ಟ್ಯಾಂಕ್ ಹೊಡೆದು ಮಣ್ಣು, ಚರಂಡಿಯಲ್ಲಿ ಹರಿದು ಹೋಗಿದೆ. ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆ ನಡೆದಿದೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿ ಕಾರ್ಖಾನೆ ಮುಟ್ಟುಗೋಲು ಹಾಕಿಕೊಂಡು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ನಗರಸಭಾ ಮಾಜಿ ಸದಸ್ಯ ಶಿವಕುಮಾರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
‘ಟ್ಯಾಂಕ್‌ನಿಂದ ಮಲಾಸ್ ಸೋರಿಕೆಯಾಗಿದ್ದು, ಕೂಡಲೇ ಅದನ್ನು ಸರಿಪಡಿಸಲು ಕ್ರಮ ವಹಿಸಲಾಗಿದೆ. ಟ್ಯಾಂಕ್‌ನ ಮಲಾಸ್ ಅನ್ನು ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆಗೆ ಟೆಂಡರ್ ಕರೆದಿದ್ದು, ಕೂಡಲೇ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಸೋರಿಕೆಯಾಗಲು ಏನು ಕಾರಣ ಎಂಬುದನ್ನು ತನಿಖೆ ನಡೆಸಲಾಗುವುದು’ ಎಂದು ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.