ಮಳವಳ್ಳಿ: ಗ್ಯಾರಂಟಿ ಯೋಜನೆಗಳಿಂದ ಮತ ಪಡೆದ ಕಾಂಗ್ರೆಸ್‌ನವರು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ವಿಫಲರಾಗಿದ್ದು, ಯಾವುದಾದರೂ ಚುನಾವಣೆ ವೇಳೆ ಮಾತ್ರ ‘ಗೃಹಲಕ್ಷ್ಮಿ’ ಯೋಜನೆಯಡಿ ಹಣ ಬರುತ್ತಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಜೆಡಿಎಸ್ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ‘ಜನರೊಂದಿಗೆ ಜನತಾದಳ’ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜಕೀಯದ ಬೇರಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯು ಡಿಸೆಂಬರ್‌ನಲ್ಲಿ ನಡೆಯಲಿದ್ದು, ಜೆಡಿಎಸ್ ಕಾರ್ಯಕರ್ತರು ಇಂದಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಬೇಕು. ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಾಗಬಹುದು. ಪಕ್ಷ ಸಂಘಟನೆಗೆ 58 ದಿನಗಳ ಪ್ರವಾಸ ಕೈಗೊಂಡಿದ್ದು, ಕಾಂಗ್ರೆಸ್ ನವರ ಸುಳ್ಳು ಭರವಸೆಯಿಂದ ನೊಂದಿರುವ ಜನರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗುವುದನ್ನು ಎದುರು ನೋಡುತ್ತಿದ್ದಾರೆ’ ಎಂದು ಹೇಳಿದರು.
ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ‘ಇಲ್ಲಿನ ಶಾಸಕರು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಮೇಲೆ ಭ್ರಷ್ಟಚಾರ ಹೆಚ್ಚಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಕೊಟ್ಟ ₹180 ಕೋಟಿ ಅನುದಾನದಲ್ಲಿ ₹6 ಕೋಟಿ ಕಮಿಷನ್ ಪಡೆದಿದ್ದಾರೆ. ನಾನು ತಂದಿರುವ ಅನುದಾನದಲ್ಲಿ ಕ್ಷೇತ್ರದಲ್ಲಿ ಕೆಲಸ ನಡೆಯುತ್ತಿದೆ. ಶಾಸಕರು ಇಬ್ಬರು ಡಮ್ಮಿ ಪಿಎಸ್ಐಗಳ ಮೂಲಕ ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಪೊಲೀಸ್ ಇಲಾಖೆಯ ದೌರ್ಜನ್ಯ ನಿಲ್ಲಿಸದಿದ್ದರೆ ಠಾಣೆಯ ಮುಂದೆಯೇ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಜೆಡಿಎಸ್ ಸೇರ್ಪಡೆಯಾದರು. ಕಾರ್ಯಕ್ರಮಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ದಂಡಿನ ಮಾರಮ್ಮನ ದೇವಸ್ಥಾನದಿಂದ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ಅನಂತ್ ರಾಂ ವೃತ್ತದ ಬಳಿ ಬೃಹತ್ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಅಭಿನಂದಿಸಲಾಯಿತು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಘಟಕದ ವಿ.ಎಂ. ವಿಶ್ವನಾಥ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಜಯರಾಮ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಟಿ.ನಂದಕುಮಾರ್, ಎಂ.ಟಿ. ಪ್ರಶಾಂತ್, ಆರ್.ಎನ್.ಸಿದ್ದರಾಜು, ನಾಗೇಶ್ ಹಾಗೂ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.