ADVERTISEMENT

ಒಂದೇ ವಾರದಲ್ಲಿ 271 ಪೋಡಿ ದುರಸ್ತಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಪೋಡಿ ದುರಸ್ತಿ ಸರಳೀಕೃತ ಕಾರ್ಯದ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 14:56 IST
Last Updated 14 ಡಿಸೆಂಬರ್ 2024, 14:56 IST
ನಾಗಮಂಗಲದ ಬಡಗೂಡ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ ಅವರು ಕೃಷಿ ಇಲಾಖೆಯಿಂದ ವಿವಿಧ ಯಂತ್ರೋಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಿದರು
ನಾಗಮಂಗಲದ ಬಡಗೂಡ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ ಅವರು ಕೃಷಿ ಇಲಾಖೆಯಿಂದ ವಿವಿಧ ಯಂತ್ರೋಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಿದರು   

ನಾಗಮಂಗಲ: ‘ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ವದ ಕೆಲಸ ಪ್ರಾರಂಭಿಸಿದ್ದು, ಒಂದೇ ವಾರದಲ್ಲಿ 414 ಪ್ರಕರಣಗಳಲ್ಲಿ ಸರ್ವೆ ನಡೆಸಿ 271 ಪೋಡಿ ದುರಸ್ತಿಗೊಳಿಸಿ ಹೊಸ ಪಹಣಿ ಮತ್ತು ಪೋಡಿ ದಾಖಲೆ ವಿತರಣೆ ಮಾಡಲಾಗುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ತಾಲ್ಲೂಕಿನಲ್ಲಿ ದರಖಾಸ್ತು ಪೋಡಿ ದುರಸ್ತಿ, ಸರಳೀಕೃತ ಕಾರ್ಯಾಚರಣೆಗೆ ಚಾಲನೆ ಹಾಗೂ ಹೊಸ ಪಹಣಿ ಮತ್ತು ಪೋಡಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಈ ಹಿಂದೆ ಹಲವಾರು ಕಾರಣಗಳಿಂದ ಒಂದು ವರ್ಷಕ್ಕೆ ಕೇವಲ 100 ಪೋಡಿ ದುರಸ್ತಿ ಮಾಡಲಾಗುತ್ತಿತ್ತು. ಈ ಕೆಲಸವನ್ನು ಸರಳೀಕರಣಗೊಳಿಸಿ ಎಲ್ಲ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಂಗ್ರಹಿಸಿಡುವ ಕೆಲಸ ಮಾಡಲಾಗುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂದಾಯ ಇಲಾಖೆ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ಕೆಲಸ ಮಾಡಿಕೊಡುತ್ತಿದ್ದಾರೆ’ ಎಂದರು‌.

ADVERTISEMENT

‘ರಾಜ್ಯದಲ್ಲಿ ಪೋಡಿ ದುರಸ್ತಿ ಸರಳೀಕೃತ ಕಾರ್ಯದ ಅಭಿಯಾನಕ್ಕೆ ಚಾಲನೆ ನೀಡಿ, ಸರ್ವೆ ಮಾಡುವ ವಿಚಾರದಲ್ಲಿ ಒಂದು ವರ್ಷದಿಂದ ಭೂಮಾಪನ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಚರ್ಚಿಸಿ 5 ಹಂತಗಳಲ್ಲಿ ಮಾಡಲಾಗುತ್ತಿದ್ದ ಕೆಲಸವನ್ನು ಈಗ ಕೇವಲ 2 ಹಂತಗಳಿಗೆ ಇಳಿಸಿ ಆನ್‌ಲೈನ್‌ನಲ್ಲಿ ಸರಳೀಕೃತಗೊಳಿಸಲಾಗಿದೆ’ ಎಂದು ತಿಳಿಸಿದರು.

‘ಉಪವಿಭಾಗಾಧಿಕಾರಿ ನ್ಯಾಯಾಲಯ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ಇದ್ದಂತಹ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಹಳೆಯ ಪ್ರಕರಣಗಳನ್ನು ಕಡಿಮೆಗೊಳಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಪೌತಿ ಆಂದೋಲನಕ್ಕೆ ಸಂಬಂಧಪಟ್ಟಂತೆ ಅನೇಕ ಕೆಲಸ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ’ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ‘ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಅನೇಕ ಬದಲಾವಣೆಯನ್ನು ತರುವ ಮೂಲಕ ಕಂದಾಯ ಇಲಾಖೆಯಲ್ಲಿ ಸುಧಾರಣೆ ತರಲಾಗಿದೆ. ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುವ ಮೂಲಕ ಸ್ಪಂದಿಸಿದ್ದೇವೆ. ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ಮಾಡಿಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಕೃಷಿ ಇಲಾಖೆಯಿಂದ ಡೀಸಲ್ ಎಂಜಿನ್, ಪಿವಿಸಿ ಪೈಪ್, ರಾಗಿ ಫ್ಲೋರ್‌ಮಿಲ್‌ ಸೇರಿದಂತೆ 380 ಫಲಾನುಭವಿಗಳಿಗೆ ₹1 ಕೋಟಿ ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರು ಮಂಜುನಾಥ್ ಜೆ., ಮೈಸೂರು ವಿಭಾಗ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ಈ. ಪ್ರಕಾಶ್, ಜಿಲ್ಲಾಧಿಕಾರಿ ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಶ್ರೀನಿವಾಸ್ ಇದ್ದರು.

‘3281 ಪ್ರಕರಣಗಳ ಗುರಿ ನಿಗದಿ’

‘ಕಂದಾಯ ಇಲಾಖೆಯಿಂದ 46 ವರ್ಷಗಳಿಂದ ಬಾಕಿ ಇದ್ದ ದರಖಾಸ್ತು ಪೋಡಿಯನ್ನು ನಮ್ಮ ಸರ್ಕಾರ ದುರಸ್ತಿ ಮಾಡಿಕೊಡುತ್ತಿದೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ರೈತ ಕುಟುಂಬಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ಸರ್ಕಾರಿ ಭೂಮಿ ಇಂದಿಗೂ ದುರಸ್ತಿಯಾಗದೇ ಬಾಕಿ ಇದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.  ‘ಜಿಲ್ಲೆಯಲ್ಲಿ ದರಖಾಸ್ತು ಪೋಡಿ ದುರಸ್ತಿ ಅಭಿಯಾನಕ್ಕೆ 3281 ಪ್ರಕರಣಗಳ ಗುರಿ ನಿಗದಿ ಮಾಡಲಾಗಿದೆ. ಅದರಲ್ಲಿ 414 ಪ್ರಕರಣಗಳ ಸರ್ವೆ ಆಗಿದ್ದು ಇದರಲ್ಲಿ 271 ಜನರಿಗೆ ಪಹಣಿಯನ್ನು ಮಾಡಿಕೊಡುತ್ತಿದ್ದೇವೆ. ಮುಂದಿನ 6 ತಿಂಗಳಲ್ಲಿ ಉಳಿದ ಸರ್ವೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ’ ಎಂದು ಹೇಳಿದರು.

‘13 ಸಾವಿರ ಪ್ರಕರಣ ಇತ್ಯರ್ಥ’
‘ಮನೆ– ಮನೆಗೆ ತೆರಳಿ ಖಾತೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಆದೇಶ ಹೊರಡಿಸಿದ್ದಾರೆ. ಹಲವಾರು ದಿನಗಳಿಂದ ಬಾಕಿ ಇದ್ದಂತಹ ಒಟ್ಟು 15 ಸಾವಿರ ಪ್ರಕರಣಗಳಲ್ಲಿ 13 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಒಂದು ವಾರದಲ್ಲಿಯೇ 416 ಪ್ರಕರಣಗಳ ಸರ್ವೆ ಮಾಡಲಾಗಿದೆ. ಜೊತೆಗೆ ಪೌತಿ ಖಾತೆಗಳನ್ನು ಸರಿಯಾದ ರೀತಿಯಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಹಂತ– ಹಂತವಾಗಿ ಪರಿಹರಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.