ADVERTISEMENT

ಮುತ್ತತ್ತಿ: ಸಂಭ್ರಮದ ಜಾತ್ರೋತ್ಸವ

ಅಪಾರ ಸಂಖ್ಯೆಯ ಭಕ್ತರು ಭಾಗಿ: ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 13:43 IST
Last Updated 7 ಸೆಪ್ಟೆಂಬರ್ 2023, 13:43 IST
ಹೂವಿನ ಅಲಂಕಾರದಲ್ಲಿ ಆಂಜನೇಯ ಸ್ವಾಮಿ
ಹೂವಿನ ಅಲಂಕಾರದಲ್ಲಿ ಆಂಜನೇಯ ಸ್ವಾಮಿ   

ಹಲಗೂರು: ಸಮೀಪದ ಮುತ್ತತ್ತಿಯ ಕಾವೇರಿ ನದಿಯ ದಡದಲ್ಲಿರುವ ಪುರಾಣ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಶ್ರಾವಣ ಮಾಸದ ಜಾತ್ರೋತ್ಸವ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

ಬಾಣಸಮುದ್ರ ಗ್ರಾಮಸ್ಥರಿಂದ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಭವ್ಯವಾದ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯದ ತುಂಬಾ ವಿವಿಧ ಬಗೆಯ ಹಣ್ಣುಗಳು ಮತ್ತು ಹೂವಿನ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ಜಾತ್ರೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳಿಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಅನ್ನಸಂತರ್ಪಣೆ ನಡೆಯಿತು. ಮಂಗಳವಾರ ಬೆಳಿಗ್ಗೆ ಮುತ್ತತ್ತಿಯಲ್ಲಿ ಭಕ್ತರಿಂದ ಉಪವಾಸ, ಹಾಲರವಿ ಸೇವೆ ಮತ್ತು ದಿವ್ಯ ರಥೋತ್ಸವ, ಏಳಗಳ್ಳಿ ಮುತ್ತೇಗೌಡರಿಂದ ಹಾಲರವಿ ತರುವ ಸೇವಾರ್ಥ ನಡೆಯಿತು.

ಬಾಳೆಹೊನ್ನಿಗ ಗ್ರಾಮದ ಆದಿ ಜಾಂಬವ ಜನಾಂಗದ ಕುಲ ಬಾಂಧವರಿಂದ ಹಾಲರವಿ ಸೇವೆ ಮತ್ತು ಬಿದಿರು ಕೋಲಿನಿಂದ ಹಸಿ ತೆಂಗಿನಕಾಯಿ ಕಾಯಿ ಒಡೆಯುವ ಸೇವೆ ನಡೆಯಿತು. ದೇವಾಲಯದ ಆವರಣದಲ್ಲಿರುವ ಬೃಹತ್‌ ಅರಳಿಮರದ ಮೇಲೆ ನಿಂತ ಅರ್ಚಕರು ಹಾಲರವಿಯನ್ನು ಉಯ್ಯಾಲೆ ಆಡಿಸಿದರು. ನೆಲದ ಮೇಲೆ ಬಿದಿರು ಕೋಲು ಹಿಡಿದು ನಿಂತಿದ್ದ ಮೂವತ್ತಕ್ಕೂ ಹೆಚ್ಚು ಭಕ್ತರು ಹಾಲರವಿಯನ್ನು ಬಿದಿರು ಕೋಲಿನಿಂದ ಚುಚ್ಚಿ ಹರಕೆ ತೀರಿಸಿದರು.

ADVERTISEMENT

ಎನ್.ಕೋಡಿಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಸೇವೆ ಮತ್ತು ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮಸ್ಥರಿಂದ ಪಲ್ಲಕ್ಕಿ ಉತ್ಸವ ನಡೆಯಿತು. ರಾಮನಗರ, ಮಂಡ್ಯ, ಕೊಳ್ಳೇಗಾಲ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಾವಿರಾರು ಭಕ್ತಾದಿಗಳು ಜಾತ್ರೋತ್ಸವದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಮಳೆಯಲ್ಲಿ ಮಿಂದ ಭಕ್ತರು: ಜಾತ್ರೋತ್ಸವದ ಹಾಲರವಿ ಸೇವೆಗೂ ಮೊದಲು ಜೋರಾಗಿ ಮಳೆ ಸುರಿಯಿತು. ನಂತರ ಹಾಲರವಿ ಸೇವೆ ಮುಗಿಯುವ ವರೆಗೂ ತುಂತುರು ಹನಿ ಬೀಳುತ್ತಿತ್ತು. ಇದರಿಂದಾಗಿ ಭಕ್ತಾಧಿಗಳು ಅಂಗಡಿ ಮುಂಗಟ್ಟುಗಳ ಬಳಿ ನಿಂತು ಪರದಾಡುವಂತಾಯಿತು.

ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಪಿಎಸ್ಐ ಬಿ.ಮಹೇಂದ್ರ ರವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಎರ್ಪಾಡಿಸಿದ್ದರು.

ಸೆ.8 ರ ಶುಕ್ರವಾರ ಬೆಳಿಗ್ಗೆ ಹಲಗೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಿಂದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ಆಂಜನೇಯ ಸ್ವಾಮಿ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.

ಮಳೆಯ ನಡುವೆಯೂ ಹಾಲರವಿ ಸೇವೆ ವೀಕ್ಷಿಸಿದ ಭಕ್ತರು
ಹಾಲರವಿ ಹೊಡೆಯಲು ಸಜ್ಜಾಗಿರುವ ಆದಿಜಾಂಬವ ಸಮಾಜದ ಭಕ್ತಾಧಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.