ADVERTISEMENT

ದಸರಾದಲ್ಲಿ ವೈಭವದ ದೀಪಾಲಂಕಾರ: ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 3:10 IST
Last Updated 1 ಸೆಪ್ಟೆಂಬರ್ 2025, 3:10 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ರೂಪಾ ಪ್ರಭಾಕರ್ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಬಿ.ಎಸ್‌. ರಮೇಶ್ ಇದ್ದಾರೆ
ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ರೂಪಾ ಪ್ರಭಾಕರ್ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಬಿ.ಎಸ್‌. ರಮೇಶ್ ಇದ್ದಾರೆ   

ಶ್ರೀರಂಗಪಟ್ಟಣ: ‘ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಹಿಂದೆಂದಿಗಿಂತಲೂ ವೈಭವದ ದೀಪಾಲಂಕಾರ ಇರುತ್ತದೆ’ ಎಂದು ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಭಾನುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ  ಚಾಲನೆ ನೀಡಿ ಅವರು ಮಾತನಾಡಿದರು.

‘ಮೈಸೂರು ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳು , ಜಂಬೂ ಸವಾರಿ  ಮಾರ್ಗ, ಕೆ.ಆರ್‌. ವೃತ್ತ, ಕೆ.ಆರ್‌ ಆಸ್ಪತ್ರೆ ವೃತ್ತ, ಅರಮನೆ ಮುಂದಿನ ವೃತ್ತ, ಎಲ್‌ಐಸಿ ವೃತ್ತ ಇತರ ಕಡೆಗಳಲ್ಲಿ ಕಣ್ಮನ ಸೆಳೆಯುವಂತೆ ದೀಪಾಲಂಕಾರ ಮಾಡಲಾಗುವುದು.  ಸಿದ್ಧತಾ ಕಾರ್ಯ ಆರಂಭವಾಗಿದೆ. ಸೆ.22ಕ್ಕೂ ಮೊದಲೇ ನಗರದಲ್ಲಿ ವಿದ್ಯುತ್‌ ದೀಪಗಳು ಝಗಮಗಿಸಲಿವೆ’ ಎಂದು ಹೇಳಿದರು.

ADVERTISEMENT

‘ ಶ್ರೀರಂಗಪಟ್ಟಣದಲ್ಲಿ ಸೆ.25ರಿಂದ ನಾಲ್ಕು ದಿನ ದಸರಾ ಉತ್ಸವವನ್ನು ಸಂಭ್ರಮದಿಂದ ನಡೆಸಲಾಗುವುದು. ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪ ಹಾಗೂ ಪ್ರಮುಖ ಬೀದಿ ಮತ್ತು ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಬನ್ನಿ ಮಂಟಪದಿಂದ ಸೆ.25ರಂದು ಮಧ್ಯಾಹ್ನ 2.30ಕ್ಕೆ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ.  ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ನಾಲ್ಕು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವೇದಿಕೆಯ ಸುತ್ತ ವಸ್ತುಪ್ರದರ್ಶನ ಏರ್ಪಡಿಸಲಾಗುತ್ತದೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಬಿಂಬಿಸುವ ಮಾದರಿಗಳ ಪ್ರದರ್ಶನ, ಮಹಿಳಾ ಸಂಘಗಳ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ ರಸ್ತೆ, ಕಾಲುವೆ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ ನಿರ್ಮಾಣ ಇತರ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ದಸರಾ ಮುಗಿದ ಬಳಿಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಪಂಚಾಯಿತಿ ಅಧ್ಯಕ್ಷೆ ರೂಪಾ ಪ್ರಭಾಕರ್‌, ಮಾಜಿ ಅಧ್ಯಕ್ಷ ದೀಪು, ಅಭಿವೃದ್ಧಿ ಅಧಿಕಾರಿ ಪ್ರಶಾಂತಬಾಬು, ಸದಸ್ಯರಾದ ರಾಜೇಶ್, ಪ್ರಕಾಶ್, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬಿ.ಎಸ್‌. ವಾಸು, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಬಿ.ಎಸ್‌. ರಾಮಚಂದ್ರು, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್‌. ಸಂದೇಶ್, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಬಿ.ಎಸ್‌. ರಮೇಶ್, ಮುಖಂಡರಾದ ಬಿ.ಎಂ. ಸುಬ್ರಹ್ಮಣ್ಯ, ವಿಷ್ಣು, ಉಮಾಶಂಕರ್‌, ಚಂದ್ರಕಾಂತ್‌, ಯಶವಂತ್‌, ಸ್ವಾಮಿಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.