
ಮಂಡ್ಯ: ‘ಮೈಷುಗರ್ ಕಾರ್ಖಾನೆಯ ಬಾಯ್ಲರ್ ಹೌಸ್ ನಿರ್ಮಾಣದ ಕುರಿತು ಡಿ.ಪಿ.ಆರ್. ಕಳುಹಿಸಲಾಗಿದೆ. ಶೀಘ್ರವಾಗಿ ಮೈಷುಗರ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಥಾಪನೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಚರ್ಚಿಸಲು ಮಂಗಳವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳು ಯಾವುದೇ ವಿಳಂಬ ಮಾಡದೆ ಶೀಘ್ರವಾಗಿ ಪಾವತಿ ಮಾಡಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿ.ಡಿ.ಎಸ್. ನಾಲೆ ಸುಮಾರು 400 ವರ್ಷಗಳಷ್ಟು ಹಳೆಯದಾಗಿದೆ. ಪ್ರಸ್ತುತ ಸಿ.ಡಿ.ಎಸ್. ನಾಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೈತರು ಸಹಕರಿಸಬೇಕು. ಶ್ರೀರಂಗಪಟ್ಟಣದಲ್ಲಿ ಸಿ.ಡಿ.ಎಸ್ ನಾಲೆ ಒಡೆದು ರೈತರಿಗೆ ಉಂಟಾಗಿದ್ದ ಬೆಳೆ ಹಾನಿ ಕುರಿತು ಸಮೀಕ್ಷೆ ಮಾಡಲಾಗಿದ್ದು, ಪರಿಹಾರದ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಪರಿಹಾರದ ಹಣ ನೇರವಾಗಿ ಜಮೆಯಾಗುತ್ತದೆ ಎಂದು ಹೇಳಿದರು.
ಸಮಸ್ಯೆಗಳ ಪಟ್ಟಿ ಕೊಡಿ
ರೈತರಿಗೆ ಸರ್ಕಾರ ನೀಡುವ ಪರಿಹಾರದ ಹಣ ಹಾಗೂ ಗೌರವಧನವನ್ನು ಬ್ಯಾಂಕುಗಳು ಸಾಲಕ್ಕೆ ಮನ್ನಾ ಮಾಡಿಕೊಳ್ಳುವಂತಿಲ್ಲ. ನಾವು ಆರ್.ಬಿ.ಐ ನಿಯಮಗಳನ್ನು ಉಲ್ಲಂಘಿಸಿ ಏನನ್ನೂ ಮಾಡುವಂತಿಲ್ಲ. ರೈತರು ಬ್ಯಾಂಕುಗಳಲ್ಲಿ ತಮಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ನಿಯಮಗಳ ಸಡಿಲೀಕರಣಕ್ಕೆ ಶಿಫಾರಸು ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ತಾತ್ಕಾಲಿಕ ಭತ್ತ ಮತ್ತು ರಾಗಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಶಾಶ್ವತವಾಗಿ ನೋಂದಣಿ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ, ಪ್ರಸ್ತುತ ರಾಗಿಗೆ ಕೊಡಲು ರೈತರು ಮುಂದಾಗಿದ್ದಾರೆ ಭತ್ತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಆಗಿಲ್ಲ. ನೋಂದಣಿಗೆ ಇನ್ನೂ ದಿನಗಳು ಬಾಕಿ ಇರುವುದರಿಂದ ಮತ್ತಷ್ಟು ರೈತರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದರು.
ಸಭೆಯಲ್ಲಿ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಕಾವೇರಿ ನೀರಾವರಿ ನಿಗಮದ ರಘುರಾಮ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪುಷ್ಪಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ರೈತ ಮುಖಂಡರಾದ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಮಂಜೇಶ್ ಗೌಡ, ಸಿ. ಕುಮಾರಿ ಪಾಲ್ಗೊಂಡಿದ್ದರು.
‘ಡ್ಯಾಂ ಸುತ್ತಮುತ್ತ ಬ್ಲಾಸ್ಟಿಂಗ್‌ಗೆ ಅವಕಾಶವಿಲ್ಲ’
ಕೆ.ಆರ್.ಎಸ್. ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡಲು ಅವಕಾಶ ಕೊಟ್ಟಿಲ್ಲ. ಸದರಿ ವ್ಯಾಪ್ತಿಯಲ್ಲಿ ಯಾರೇ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸ್ಫೋಟಗಳನ್ನು ಮಾಡುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಯಾರೇ ಅಕ್ರಮವಾಗಿ ಗಣಿಗಾರಿಕೆ ಮಾಡಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜಾರಿಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಎಚ್ಚರಿಸಿದರು.
ರೈತರಿಗೆ ಬಾಧಿಸುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ಈಗಾಗಲೇ ಎರಡು ಸಭೆ ನಡೆಸಿ ಸೂಚನೆ ನೀಡಲಾಗಿದೆ. ಮೈಕ್ರೋ ಫೈನಾನ್ಸ್ ಗಳು ಜಿಲ್ಲಾಡಳಿತದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿರುವ ಕುರಿತು ಪರೀಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.