ADVERTISEMENT

ಮೈಷುಗರ್‌ ಕಾರ್ಖಾನೆ ವಿಚಾರ: ಒಂದಾದ ಹೋರಾಟಗಾರರು, ಒಗ್ಗಟ್ಟಿಲ್ಲದ ಮುಖಂಡರು

ಮೈಷುಗರ್‌; ರಾಜಕಾರಣದಲ್ಲಿ ಮುಳುಗಿದ ವಿವಿಧ ಪಕ್ಷಗಳ ಮುಖಂಡರು, ಪ್ರತ್ಯೇಕವಾಗಿ ನಾಯಕರ ಭೇಟಿ

ಎಂ.ಎನ್.ಯೋಗೇಶ್‌
Published 5 ಜುಲೈ 2021, 19:30 IST
Last Updated 5 ಜುಲೈ 2021, 19:30 IST
ಮೈಷುಗರ್‌ ಪ್ರವೇಶದ್ವಾರದಲ್ಲಿ ‘ಕಾರ್ಖಾನೆ ಮಾರಾಟಕ್ಕಿಲ್ಲ’ ಎಂದು ಚೀಟಿ ಅಂಟಿಸಿರುವುದು
ಮೈಷುಗರ್‌ ಪ್ರವೇಶದ್ವಾರದಲ್ಲಿ ‘ಕಾರ್ಖಾನೆ ಮಾರಾಟಕ್ಕಿಲ್ಲ’ ಎಂದು ಚೀಟಿ ಅಂಟಿಸಿರುವುದು   

ಮಂಡ್ಯ: ಮೈಷುಗರ್‌ ಕಾರ್ಖಾನೆ ವಿಚಾರದಲ್ಲಿ ಹೋರಾಟಗಾರರು ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದಾರೆ. ಆದರೆ ವಿವಿಧ ಪಕ್ಷಗಳ ಮುಖಂಡರು, ಜನಪ್ರತಿಧಿಗಳು ಒಗ್ಗಟ್ಟು ಪ್ರದರ್ಶನ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.

ಕಾರ್ಖಾನೆ ಆರಂಭಿಸುವ ವಿಚಾರಕ್ಕೆ ಆರಂಭದಲ್ಲಿ ರೈತ ಹಿತರಕ್ಷಣಾ ಸಮಿತಿ ಹಾಗೂ ಕಬ್ಬು ಬೆಳೆಗಾರರ ಒಕ್ಕೂಟದ ನಡುವೆ ಭಿನ್ನಾಭಿಪ್ರಾಯವಿತ್ತು. ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭವಾಗಬೇಕು ಎಂದು ಹಿತರಕ್ಷಣಾ ಸಮಿತಿ ಸದಸ್ಯರು ಮೊದಲಿನಿಂದಲೂ ಒತ್ತಾಯಿಸುತ್ತಿದ್ದಾರೆರೆ. ಆದರೆ ಕಬ್ಬು ಬೆಳೆಗಾರರ ಒಕ್ಕೂಟದ ಸದಸ್ಯರು ಒ ಅಂಡ್‌ ಎಂ (ಕಾರ್ಯಾಚರಣೆ ಮತ್ತು ನಿರ್ವಹಣೆ) ಮಾದರಿಯಾದರೂ ಸರಿ, ಮೊದಲು ಕಾರ್ಖಾನೆ ಆರಂಭವಾಗಲಿ ಎಂದು ಒತ್ತಾಯಿಸಿದ್ದರು.

ಕಳೆದ ವರ್ಷ ಈ ಸಂಘಟನೆಗಳ ನಡುವೆ ಕಾರ್ಖಾನೆ ವಿಚಾರ ಘರ್ಷಣೆಗೆ ಕಾರಣವಾಗಿತ್ತು. ರೈತ ಇತರಕ್ಷಣಾ ಸಮಿತಿ ಸದಸ್ಯರು ಕಾರ್ಖಾನೆ ಆರಂಭಕ್ಕೆ ಅಡ್ಡಿಯಾಗಿದ್ದಾರೆ ಎಂದು ಕಬ್ಬು ಬೆಳೆಗಾರರ ಒಕ್ಕೂಟದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ವಿ.ವಿ ರಸ್ತೆಯಲ್ಲಿ ಸಮಿತಿಯ ಭಿತ್ತಿ ಪತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ರೈತಸಂಘದ (ಮೂಲಸಂಘಟನೆ) ಕೆಲ ಸದಸ್ಯರೂ ಒಂ ಅಂಡ್‌ ಎಂ ಪರ ಇದ್ದರು. ಜೊತೆಗೆ ವಿವಿಧ ಪ್ರಗತಿ ಪರ ಸಂಘಟನೆಗಳ ನಡುವೆಯೂ ಭಿನ್ನಾಭಿಪ್ರಾಯವಿತ್ತು.

ADVERTISEMENT

ಆದರೆ ಸರ್ಕಾರ ಕಾರ್ಖಾನೆಯನ್ನು 40 ವರ್ಷಗಳವರೆಗೆ ಖಾಸಗಿ ಗುತ್ತಿಗೆ ನೀಡುವ ನಿರ್ಧಾರ ಪ್ರಕಟಿಸಿದ ನಂತರ ಎಲ್ಲಾ ಸಂಘಟನೆ ಮುಖಂಡರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಎಲ್ಲಾ ಸಂಘಟನೆ ಮುಖಂಡರು ಒಂದಾಗಿದ್ದು ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭವಾಗಬೇಕು. ಒ ಅಂಡ ಎಂ ಕೂಡ ಬೇಡ ಎಂದು ಒಕ್ಕೊರಲಿನಿಂದ ಒತ್ತಾಯಿಸುತ್ತಿದ್ದಾರೆ. ಒಗ್ಗಟ್ಟಿನ ಹೋರಾಟಕ್ಕೆ ಸಜ್ಜಾಗಿದ್ದಾರೆ.

ರಾಜಕೀಯ ವಸ್ತು: ಐತಿಹಾಸಿಕ ಕಾರ್ಖಾನೆ ವಿಚಾರದಲ್ಲಿ ಹೋರಾಟಗಾರರಿಗೆ ಇರುವ ಒಗ್ಗಟ್ಟು ರಾಜಕೀಯ ಪಕ್ಷಗಳ ಮುಖಂಡರಿಗೆ ಇಲ್ಲವಾಗಿದೆ. ಈಗಲೂ ಕಾರ್ಖಾನೆ ವಿವಿಧ ಪಕ್ಷಗಳ ರಾಜಕೀಯ ವಸ್ತುವಾಗಿಯೇ ಉಳಿದಿದೆ. ಈ ವಿಚಾರದಲ್ಲಿ ಜೆಡಿಎಸ್‌ ಶಾಸಕರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಧ್ಯಪ್ರವೇಶ ಬಯಸಿದರೆ, ಕಾಂಗ್ರೆಸ್‌ ಮುಖಂಡರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಬೆಂಬಲ ಬಯಸುತ್ತಿದ್ದಾರೆ.

ಜೆಡಿಎಸ್‌ ಮುಖಂಡರು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಈಗಾಗಲೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ. ಸಿ.ಎಂ ಜೊತೆ ಮಾತನಾಡುವುದಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ.

ಈ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸೇರಿ ಬಿಜೆಪಿ ಮುಖಂಡರು ಯಾವುದೇ ನಿಲುವು ವ್ಯಕ್ತಪಡಿಸಿಲ್ಲ. ರೈತರ ಹಿತಕ್ಕಾಗಿ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧ ಎಂದಷ್ಟೇ ತಿಳಿಸುತ್ತಾರೆ.

‘ನಾವು ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಇಬ್ಬರನ್ನೂ ಭೇಟಿಯಾಗಿ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸುವಂತೆ ಮನವಿ ಸಲ್ಲಿಸಿದ್ದೇವೆ. ಎಲ್ಲಾ ಪಕ್ಷಗಳ ಮುಖಂಡರು ರಾಜಕೀಯ ಬಿಟ್ಟು ರೈತರ ಪರವಾಗಿ ನಿಲ್ಲಬೇಕು’ ಎಂದು ರೈತ ಹಿತರಕ್ಷಣಾ ಸಮಿತಿ ನಾಯಕಿ ಸುನಂದಾ ಜಯರಾಂ ಹೇಳಿದರು.

‘40 ವರ್ಷಗಳವರೆಗೆ ಖಾಸಗಿ ಗುತ್ತಿಗೆ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ. ಮೈಷುಗರ್‌ ಯಜಮಾನಿಕೆ ಜಿಲ್ಲೆಯ ರೈತರ ಕೈಯಲ್ಲೇ ಉಳಿಯಬೇಕು. ಯಾರೋ ಖಾಸಗಿ ಗತ್ತಿಗೆದಾರನಿಗೆ ಕೊಡಬಾರದು. ಜೊತೆಗೆ ರಾಜಕೀಯ ವಸ್ತುವೂ ಆಗಬಾರದು’ ಎಂದು ಕಬ್ಬು ಒಪ್ಪಿಗೆದಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್‌ ಹೇಳಿದರು.

*****

ಸುಮಲತಾ ಭಿನ್ನ ನಿಲುವು

ಮೈಷುಗರ್‌ ಕಾರ್ಖಾನೆ ವಿಚಾರದಲ್ಲಿ ಸಂಸದೆ ಸುಮಲತಾ ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ‘ಸ್ಥಗಿತಗೊಂಡಿರುವ ಕಾರ್ಖಾನೆಯ ಯಾವುದಾದರೂ ರೀತಿಯಲ್ಲಿ ಆರಂಭವಾಗಬೇಕು, ಸರ್ಕಾರಿ ಸ್ವಾಮ್ಯ, ಖಾಸಗೀಕರಣ, ಒಂ ಅಂಡ್‌ ಎಂ ಏನಾದರೂ ಸರಿ. ಕಾರ್ಖಾನೆ ಕಬ್ಬು ಅರೆಯಬೇಕು’ ಎಂದು ತಿಳಿಸಿದ್ದಾರೆ.

ಸುಮಲತಾ ನಿಲುವಿಗೆ ರೈತ ಹಿತರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು, ಅದಕ್ಕೆ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಸದರು ಬೆಂಬಲ ನೀಡಬೇಕು ಎಂದು ಸಮಿತಿ ಸದಸ್ಯರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.