ADVERTISEMENT

ಸಮಿತಿ ವರದಿ ಆಧರಿಸಿ ಮೈಷುಗರ್‌ ಆರಂಭ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ

ಕಾರ್ಖಾನೆ ಆವರಣದಲ್ಲಿ ಸಭೆ; ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 13:56 IST
Last Updated 23 ಫೆಬ್ರುವರಿ 2022, 13:56 IST
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಂಗಳವಾರ ಮೈಷುಗರ್‌ ಕಾರ್ಖಾನೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಂಗಳವಾರ ಮೈಷುಗರ್‌ ಕಾರ್ಖಾನೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು   

ಮಂಡ್ಯ: ‘ಮೈಷುಗರ್‌ ಕಾರ್ಖಾನೆ ಆರಂಭಿಸಲು ತಾಂತ್ರಿಕ ಹಾಗೂ ಆರ್ಥಿಕ ಸಮಿತಿಗಳನ್ನು ರಚಿಸಲಾಗಿದ್ದು ವರದಿ ಸಲ್ಲಿಸಲು ಗಡುವು ನೀಡಲಾಗಿದೆ. ವರದಿ ಬಂದ ನಂತರ ಈ ವರ್ಷದಿಂದಲೇ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ ನೀಡಿದರು.

ನಗರದ ಮೈಷುಗರ್‌ ಕಾರ್ಖಾನೆ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮಂಡ್ಯ ಜಿಲ್ಲೆಯ ರೈತರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸಲು ಮುಖ್ಯಮಂತ್ರಿಗಳೇ ನಿರ್ಧಾರ ಪ್ರಕಟಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಖಾನೆ ಆರಂಭಿಸುವ ಸಾಧ್ಯತೆಗಳ ಬಗ್ಗೆ ವರದಿ ನೀಡಲು ಪ್ರತ್ಯೇಕವಾಗಿ ತಾಂತ್ರಿಕ ಸಮಿತಿ ಹಾಗೂ ಆರ್ಥಿಕ ಸಮಿತಿ ರಚಿಸಲಾಗಿದೆ. ವರದಿ ಆಧರಿಸಿ ಕಾರ್ಖಾನೆ ಆರಂಭಿಸುವ ಚಟುವಟಿಕೆ ಆರಂಭಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ನಾನು ಮಂಡ್ಯಕ್ಕೆ ಬರುವುದಕ್ಕೆ ಮೊದಲು ಕಾರ್ಖಾನೆ ಆರಂಭಿಸಲು ಬೇಕಾದ 4ಜಿ ವಿನಾಯಿತಿ ಆದೇಶಕ್ಕೆ ಸಹಿ ಮಾಡಿ ಬಂದಿದ್ದೇನೆ. ಇದರಿಂದ ವರದಿ ಬಂದ ತಕ್ಷಣ ಕಾರ್ಖಾನೆ ಆರಂಭಿಸಲು ಸಹಾಯಕವಾಗಲಿದೆ. ಮುಂದೆ ಯಾವುದೇ ರೀತಿಯಿಂದ ಕಾರ್ಖಾನೆ ಸ್ಥಗಿತಗೊಳ್ಳದಂತೆ ಎಲ್ಲಾ ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸಮಗ್ರ ಯೋಜನೆ ರೂಪಿಸಲಾಗುವುದು’ ಎಂದರು.

‘ಕಾರ್ಖಾನೆ ಸ್ಥಗಿತಗೊಂಡ ಬಗ್ಗೆ ಇತಿಹಾಸವನ್ನು ನಾವು ಕೆದಕಲು ಹೋಗುವುದಿಲ್ಲ. ಗೊಂದಲಗಳ ಬಗ್ಗೆ ಚರ್ಚೆ ಮಾಡಿದರೆ ರಾಜಕೀಯ ಬರುತ್ತದೆ. ರೈತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದ್ದು ಈ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಹಿಂದಿನ ಸರ್ಕಾರದವರು ಮಾಡಿಲ್ಲ ಎಂಬ ಆರೋಪ ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ಅತೀ ಶೀಘ್ರದಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ ನೀಡಲಾಗುವುದು’ ಎಂದರು.

‘ರೈತ ಹೋರಾಟಗಾರರ ಬಗ್ಗೆ ನನಗೆ ಗೌರವವಿದೆ, ನಾನೂ ಕೂಡ ರೈತ ಹೋರಾಟದಿಂದಲೇ ಬಂದಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಎಲ್ಲರ ಹಕ್ಕು. ಮುಖಂಡರು ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಜನಪ್ರತಿಧಿಗಳು ಹಾಗೂ ರೈತ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಂಸದೆ ಸುಮಲತಾ ಮಾತನಾಡಿ ‘ನಾನು ಸಂಸದೆಯಾಗಿ ಮೈಷುಗರ್‌ ಕಾರ್ಖಾನೆ ಆರಂಭಿಸಲು ಕಳೆದ ಮೂರು ವರ್ಷಗಳಿಂದಲೂ ಹೋರಾಟ ಮಾಡಿದ್ದೇನೆ. ಈ ಕುರಿತು ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ್ದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೂ ಮಾತನಾಡಿದ್ದೆ. ಸಕ್ಕರೆ ಸಚಿವರು ಮುಖ್ಯಮಂತ್ರಿಗಳ ಸಂದೇಶವನ್ನು ಮಂಡ್ಯಕ್ಕೆ ತಂದಿದ್ದಾರೆ. ಆದಷ್ಟು ಬೇಗ ಕಾರ್ಖಾನೆ ಆರಂಭವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಹೇಳಿದರು.

‘ನನಗೆ ರಾಜಕಾರಣ ಮುಖ್ಯವಲ್ಲ, ಜಿಲ್ಲೆಯ ರೈತರ ಹಿತವೇ ಮುಖ್ಯ. ಸರ್ಕಾರ ಮೈಷುಗರ್‌ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದು ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಸ್ವಾರ್ಥ ಹಾಗೂ ವೈಯಕ್ತಿಕವಾಗಿ ಯಾರೂ ಬಳಸಿಕೊಳ್ಳಬಾರದು. ಈಗಾಗಲೇ ಪಾಂಡವಪುರ ಸಕ್ಕರೆ ಕಾರ್ಖಾನೆ ಆರಂಭವಾಗಿ ರೈತರಿಗೆ ಅನುಕೂಲವಾಗಿದೆ. ಮೈಷುಗರ್‌ ಕಾರ್ಖಾನೆಯಿಂದಲೂ ಅನುಕೂಲವಾಗಲಿದೆ’ ಎಂದರು.

‘ಕಾರ್ಖಾನೆಯನ್ನು ಮುಂದಿಟ್ಟುಕೊಂಡು ನನ್ನ ವಿರುದ್ದ ರಾಜಕಾರಣ ಮಾಡಲು ಮುಂದಾಗಿದ್ದರು. ಜನರು ಮೂರ್ಖರಲ್ಲ, ಯಾರು ಯಾವುದರ ಪರ, ಯಾವುದಕ್ಕಾಗಿ ಹೋರಾಟ ಮಾಡಿತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ನಮ್ಮ ಹೋರಾಟವನ್ನು ದುರುದ್ದೇಶ ಎಂದು ಆರೋಪ ಮಾಡಿದರೆ ಯಾರಿಗೂ ಒಳ್ಳೆಯದಾಗುವುದಿಲ್ಲ. ಜಿಲ್ಲೆಯ ರೈತರಿಗೆ ಒಳ್ಳೆಯ ಕೆಲಸಗಳನ್ನು ಮಾಡುವುದೇ ನನ್ನ ಉದ್ದೇಶವಾಗಿದೆ’ ಎಂದರು. ನಂತರ ಕೆಲ ಹೊತ್ತು ಸಚಿವರು, ಜನಪ್ರತಿನಿಧಿಗಳು ಕಾರ್ಖಾನೆಯನ್ನು ವೀಕ್ಷಿಸಿದರು.

ಸಭೆಯಲ್ಲಿ ಶಾಸಕರಾದ ಡಿ.ಸಿ.ತಮ್ಮಣ್ಣ, ಎಂ.ಶ್ರೀನಿವಾಸ್‌, ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ದಿನೇಶ್‌ ಗೂಳಿಗೌಡ, ಕಾರ್ಖಾನೆ ಅಧ್ಯಕ್ಷ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಎಸ್‌.ಅಶ್ವತಿ ಇದ್ದರು.

***

ಮತ್ತಷ್ಟು ವಿಳಂಬ ಬೇಡ: ಒತ್ತಾಯ

ಸಭೆಯ ನಂತರ ಸಕ್ಕರೆ ಸಚಿವರನ್ನು ಭೇಟಿಯಾದ ರೈತ ಮುಖಂಡರು, ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸಿ 4 ತಿಂಗಳವಾಗಿವೆ. ಈಗ ಇನ್ನಷ್ಟು ವಿಳಂಬ ಮಾಡಬಾರದು. ಆದಷ್ಟು ಬೇಗ ಕಾರ್ಖಾನೆ ಆರಂಭವಾಗಬೇಕು. ಜಿಲ್ಲೆಯ ರೈತರು ಅದನ್ನು ಎದುರು ನೋಡುತ್ತಿದ್ದಾರೆ ಎಂದರು.

ಬಜೆಟ್‌ನಲ್ಲಿ ಘೋಷಣೆಯಾಗುವ ಸಂಪೂರ್ಣ ಹಣ ಕಾರ್ಖಾನೆ ಆರಂಭವಾಗುವುದಕ್ಕೆ ಮಾತ್ರ ಬಳಕೆಯಾಗಬೇಕು. ಸಾಲ, ಇತರ ಬಾಕಿಗಾಗಿ ಆ ಹಣವನ್ನು ಬಳಕೆ ಮಾಡಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಖಾನೆಗೆ ದಕ್ಷ ಹಾಗೂ ತಾಂತ್ರಿಕತೆ ಅರಿವುಳ್ಳ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.