ADVERTISEMENT

ಮೈಷುಗರ್‌ ಧರಣಿ ಸ್ಥಳಕ್ಕೆ ಸಿಎಂ ಭೇಟಿ: 18ಕ್ಕೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 12:08 IST
Last Updated 15 ಅಕ್ಟೋಬರ್ 2021, 12:08 IST
ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮೈಷುಗರ್‌ ಉಳಿವಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು
ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮೈಷುಗರ್‌ ಉಳಿವಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು   

ಮಂಡ್ಯ: ‘ಮೈಷುಗರ್‌ ಕಾರ್ಖಾನೆಯನ್ನು ಶೀಘ್ರ ಆರಂಭಿಸುವ ಕುರಿತು ಚರ್ಚಿಸಲು ಅ.18ರಂದು ಜಿಲ್ಲೆಯ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಜಿಲ್ಲೆಯ ರೈತರ ಹಿತ ಕಾಯುವ ದೃಷ್ಟಿಯಿಂದ ಅಂದು ಸಿಹಿ ಸುದ್ದಿ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಮೈಸೂರು ಜಂಬೂಸವಾರಿ ಸಮಾರಂಭಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆ ಶುಕ್ರವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

‘ಕಳೆದ ಬಾರಿ ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಮೈಷುಗರ್‌ ಕಾರ್ಖಾನೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮಂಡ್ಯ ಎಂದರೆ ಮೈಷುಗರ್‌, ಮೈಷುಗರ್‌ ಎಂದರೆ ಮಂಡ್ಯ ಎಂಬಂತಿದೆ. ಸಕ್ಕರೆ ಜಿಲ್ಲೆ ಎಂದು ಹೆಸರು ಬರುವಲ್ಲಿ ಮೈಷುಗರ್‌ ಕೂಡ ಕಾರಣ. ನನಗೆ ಎಲ್ಲಾ ವಿಚಾರ ತಿಳಿದಿದೆ. ಇಂತಹ ಸಕ್ಕರೆ ಕಾರ್ಖಾನೆ ಉಳಿಯಬೇಕು ಎಂಬುದು ನಮ್ಮ ಆಶಯವೂ ಆಗಿದೆ’ ಎಂದರು.

ADVERTISEMENT

‘ಕಬ್ಬು ನುರಿಸಿದರೆ ಮಾತ್ರ ಮಂಡ್ಯ ಜಿಲ್ಲೆಗೆ ಹೆಸರು ಬರುತ್ತದೆ. ಮೈಷುಗರ್‌ ಕಾರ್ಖಾನೆಯಲ್ಲಿ ಕಬ್ಬು ನುರಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲಾ ಸಮಸ್ಯೆಗಳಿಗೂ ಅ.18ರಂದು ಅಂತ್ಯ ಹಾಡೋಣ, ಈ ಬಗ್ಗೆ ರೈತರಲ್ಲಿ, ಮುಖಂಡರಲ್ಲಿ ಯಾವುದೇ ಗೊಂದಲ ಬೇಡ. ಒಮ್ಮೆ ಕಾರ್ಖಾನೆ ಆರಂಭವಾದರೆ ಅದು ಮತ್ತೊಮ್ಮೆ ನಿಲ್ಲಬಾರದು, ಅಂತಹ ನಿರ್ಣಯ ಕೈಗೊಳ್ಳಲಾಗುವುದು’ ಎಂದರು.

‘ಜಿಲ್ಲೆಯ ರೈತರ ಮೇಲೆ ನನಗೆ ಭರವಸೆ ಇದೆ, ನಾನು ಕೂಡ ಹೋರಾಟದ ಹಾದಿಯಿಂದಲೇ ಬಂದವನು. ಹೀಗಾಗಿ ಚಳವಳಿ ಮೇಲೆ ನನಗೆ ಗೌರವವಿದೆ. ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ನಾನು ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂಬುದು ಹೋರಾಟಗಾರರ ಆಶಯವಾಗಿತ್ತು. ಅದರಂತೆ ಸ್ಥಳಕ್ಕೆ ಬಂದಿದ್ದೇನೆ’ ಎಂದು ಹೇಳಿದರು.

ಘೋಷಣೆಗೆ ಒತ್ತಾಯ: ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸುವ ಬಗ್ಗೆ ಸ್ಥಳದಲ್ಲೇ ಘೋಷಣೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ ‘ಕಾರ್ಖಾನೆ ಆರಂಭಿಸುವ ಬಗ್ಗೆ ಸಕಾರಾತ್ಮಕವಾಗಿ ಭರವಸೆ ಕೊಟ್ಟಿದ್ದೀರಿ. ಶೇ 99ರಷ್ಟು ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಈ ಕುರಿತು ಸ್ಥಳದಲ್ಲೇ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ನಗುತ್ತಾ ಉತ್ತರಿಸಿದ ಮುಖ್ಯಮಂತ್ರಿ ‘ಯಾವುದನ್ನೂ ಸ್ಥಳದಲ್ಲೇ ಘೋಷಣೆ ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದ್ದು ಅದರಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರ ಸಲಹೆಮ ಸೂಚನೆ ಪಡೆದು ನಂತರ ಸರ್ಕಾರದ ನಿರ್ಣಯ ಪ್ರಕಟಿಸಲಾಗುವುದು’ ಎಂದು ಹೇಳಿದರು. ನಂತರ ರೈತರಿಂದ ಮನವಿ ಪತ್ರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ, ರೈತ ಸಂಘ(ಮೂಲ ಸಂಘಟನೆ)ದ ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಎಂ.ಬಿ.ಶ್ರೀನಿವಾಸ್, ಕನ್ನಡಸೇನೆ ಮಂಜುನಾಥ್‌, ಸುಧೀರ್‌ಕುಮಾರ್, ಬಸವರಾಜು, ದೊಡ್ಡಬಾಣಸವಾಡಿ ಹರೀಶ್, ತಿಮ್ಮೇಗೌಡ ಭಾಗವಹಿಸಿದ್ದರು.

*****

ರಸ್ತೆತಡೆ ಕೈಬಿಟ್ಟ ರೈತರು

ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು, ಕಬ್ಬಿಗೆ ವೈಜ್ಞಾನಿಕ ದರ ನಿಗದಿಯಾಗಬೇಕು ಎಂದು ಒತ್ತಾಯಿಸಿ ರೈತಸಂಘದ ಮುಖಂಡರು ಶುಕ್ರವಾರ ಮುಖ್ಯಮಂತ್ರಿ ಬರುವ ವೇಳೆ ಜಿಲ್ಲೆಯ 2 ಕಡೆ ರಸ್ತೆತಡೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಮಾಹಿತಿ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಗುರುವಾರ ಸಂಜೆ ರೈತ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾದರು. ಆಯುಧಪೂಜೆ ದಿನವೂ ಸಭೆ ಕರೆದು ರೈತ ಮುಖಂಡರ ಜೊತೆ ಮಾತನಾಡಿದರು.

‘ಮುಖ್ಯಮಂತ್ರಿಗಳು ಅ.18ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ. ನಮ್ಮ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಜೊತೆ ಮುಖ್ಯಮಂತ್ರಿಗಳು ಮಾತನಾಡಿ ಕಬ್ಬಿಗೆ ದರ ನಿಗದಿ ಕುರಿತೂ ಚಿರ್ಚಿಸುವುದಾಗಿಯೂ ತಿಳಿಸಿದ್ದಾರೆ. ಹೀಗಾಗಿ ರಸ್ತೆತಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.