ಮಂಡ್ಯ: ಐತಿಹಾಸಿಕ ಮೈಷುಗರ್ ಕಾರ್ಖಾನೆ ಅಂಗಳದಲ್ಲಿದ್ದ ಮದ್ಯ ತಯಾರಿಕಾ ಘಟಕ ದೇಶದ ಅತ್ಯಂತ ಹಳೆಯ ಹಾಗೂ ಅತ್ಯುತ್ತಮ ಡಿಸ್ಟೆಲರಿ ಎಂದು ಪ್ರಖ್ಯಾತಿ ಪಡೆದಿತ್ತು. ಇಲ್ಲಿ ತಯಾರಾಗುತ್ತಿದ್ದ ಮಂಡ್ಯ ಬ್ರಾಂಡಿ, ಬುಕನೀರ್ ರಮ್, ವಿಸ್ಕಿ ರಕ್ಷಣಾ ಇಲಾಖೆಗೆ ಸರಬರಾಜು ಮಾಡಲಾಗುತ್ತಿತ್ತು.
ಮೈಷುಗರ್ ಕಾರ್ಖಾನೆ ನಿರ್ಮಿಸಿರುವ ಮೈಲಿಗಲ್ಲುಗಳನ್ನು ಒಮ್ಮೆ ತಿರುಗಿ ನೋಡಿದರೆ ಭವ್ಯ ಪರಂಪರೆಯ ದರ್ಶನವಾಗುತ್ತದೆ. ಈ ಐತಿಹಾಸಿಕ ಕಾರ್ಖಾನೆ ಕೇವಲ ಮಂಡ್ಯಕ್ಕಷ್ಟೇ ಸೀಮಿತವಾಗಿರಲಿಲ್ಲ, ರಾಜ್ಯ, ರಾಷ್ಟ್ರದಲ್ಲಿ ಮಾತ್ರ ಪ್ರಸಿದ್ಧಿ ಪಡೆದಿರಲಿಲ್ಲ. ಇಡೀ ಏಷ್ಯಾ ಖಂಡದಲ್ಲಿ ಕಾರ್ಖಾನೆಯ ಸಾಧನೆಗಳನ್ನು ಪ್ರಶಂಸೆ ಮಾಡಿರುವ ದಾಖಲೆಗಳು ಮೈಷುಗರ್ ಅಂಗಳದಲ್ಲಿವೆ.
‘ಮಂಡ್ಯ ಅಂದರೆ ಇಂಡಿಯಾ’ ಎಂಬ ಹೆಸರು ಬರಲು ಮೈಷುಗರ್ ಕಾರ್ಖಾನೆ ಹಾಗೂ ಅದರ ಉಪ ಉತ್ಪನ್ನಗಳೇ ಕಾರಣ. ಇದರಿಂದಾಗಿಯೇ ರೈತ ಮುಖಂಡರು ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭವಾಗಬೇಕು ಎಂದು ಒತ್ತಾಯಿಸುತ್ತಾರೆ. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಗೊಳ್ಳುವ ನಿರ್ಧಾರ ಪ್ರಕಟವಾಗಿರುವ ಈ ಹೊತ್ತಿನಲ್ಲಿ ಡಿಸ್ಟೆಲರಿಗೂ ಪುನಶ್ಚೇತನ ನಿಡಬೇಕು ಎಂಬ ಒತ್ತಾಯ ವ್ಯಾಪಕವಾಗಿದೆ.
ಕಾರ್ಖಾನೆ ಆರಂಭವಾದ ಜೊತೆಜೊತೆಯಲ್ಲೇ ಡಿಸ್ಟೆಲರಿ (1935) ಕೂಡ ಆರಂಭವಾಗಿತ್ತು. ಆರಂಭದಲ್ಲಿ ಮೈಸೂರು ರಾಜ್ಯದ 13 ಜಿಲ್ಲೆಗಳಿಗೆ ಮದ್ಯ ಹಂಚಿಕೆ ಜವಾಬ್ದಾರಿ ನೀಡಲಾಗಿತ್ತು. ನಂತರ ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ಹಂಚಿಕೆ ನಡೆಯುತ್ತಿತ್ತು. ಆರಂಭದಲ್ಲಿ ಪ್ರತಿದಿನ 7 ಸಾವಿರ ಲೀಟರ್ ಮದ್ಯ ತಯಾರಿಸುತ್ತಿತ್ತು. ಡಿಸ್ಟೆಲರಿ ಪ್ರಸಿದ್ಧಿ ಪಡೆದಂತೆ 1985ರ ನಂತರ ಘಟಕದ ಸಾಮರ್ಥ್ಯ ದಿನಕ್ಕೆ 35 ಸಾವಿರ ಲೀಟರ್‌ಗೆ ಹೆಚ್ಚಾಯಿತು.
ಪ್ರಸಿದ್ಧಿ ಪಡೆದಿದ್ದ ಬ್ರ್ಯಾಂಡ್‌ಗಳು: ‘ಮಂಡ್ಯ ಬ್ರಾಂದಿ’ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದ ಬ್ರ್ಯಾಂಡ್ ಆಗಿತ್ತು. ಬುಕನೀರ್ ರಮ್, ಬಲ್ಲೇರಿನ ಬ್ರಾಂದಿ, ಸೆನೇಟರ್ ವಿಸ್ಕಿ ಇಡೀ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದವು. ಕಾರ್ಖಾನೆ ಜೊತೆ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ವಿದೇಶಗಳಿಗೂ ಈ ಮದ್ಯವನ್ನು ಕೊಂಡೊಯ್ಯುತ್ತಿದ್ದರು.
ಮುಖ್ಯವಾಗಿ ರಕ್ಷಣಾ ಇಲಾಖೆ ಕ್ಯಾಂಟೀನ್ ಸ್ಟೋರ್ಸ್, ಆರ್ಮಿ ಮಾರುಕಟ್ಟೆಗಳಲ್ಲಿ ಈ ಮದ್ಯ ಅತೀ ಹೆಚ್ಚು ಮಾರಾಟವಾಗುತ್ತಿದ್ದವು. ಅತ್ಯಾಧುನಿಕ ತಂತ್ರಜ್ಞಾನದಿಂದ ಮದ್ಯ ತಯಾರಿಸುತ್ತಿದ್ದ ಘಟಕ ದಿನವೊಂದಕ್ಕೆ 2 ಸಾವಿರ ಪೆಟ್ಟಿಗೆ ಸೀಸೆ ತುಂಬುವ ಸಾಮರ್ಥ್ಯ ಹೊಂದಿತ್ತು. ಪ್ರತಿ ತಿಂಗಳು 5 ಲಕ್ಷ ಲೀಟರ್ ಮದ್ಯ ವಿವಿಧೆಡೆ ಹಂಚಿಕೆಯಾಗುತ್ತಿತ್ತು.
‘ಮೈಷುಗರ್‌ನಲ್ಲಿ ಉತ್ಪಾದನೆಗೊಳ್ಳುತ್ತಿದ್ದ ಮದ್ಯಕ್ಕೆ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್ಸ್) ನಿಂದ ಪ್ರಾಮಾಣಿಕೃತ ಮಾನ್ಯತೆ ದೊರೆತಿತ್ತು. ಇದರ ಆಧಾರದ ಮೇಲೆ ರಕ್ಷಣಾ ಇಲಾಖೆ ಹೆಚ್ಚಿನ ಪ್ರಮಾಣದ ಮೈಷುಗರ್ ಮದ್ಯ ಖರೀದಿ ಮಾಡುತ್ತಿತ್ತು. ಹೆಚ್ಚು ಲಾಭದಲ್ಲಿದ್ದ ಡಿಸ್ಟೆಲರಿಗೆ ಈಗಲೂ ಪುನಶ್ಚೇತನ ನೀಡಲು ಸಾಧ್ಯವಿದೆ’ ಎಂದು ನಿವೃತ್ತ ಕಾರ್ಮಿಕರೊಬ್ಬರು ತಿಳಿಸಿದರು.
ಗೋಲ್ಡನ್ ಸಿರಪ್: ಆಲೆಮನೆಯಲ್ಲಿ ದೊರೆಯುವ ಕಬ್ಬಿನ ಪಾಕವನ್ನು ಸಿರಪ್‌ನಂತೆ ಮಡಿಕೆಯಲ್ಲಿ ತುಂಬಿಕೊಂಡು ಬಳಸುವುದನ್ನು ಈಗಲೂ ನಾವು ನೋಡುತ್ತೇವೆ. ಮೈಷುಗರ್ ಕಾರ್ಖಾನೆಯ ಸಕ್ಕರೆ ಪಾಕವನ್ನೂ ಟಿನ್‌ಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತಿತ್ತು. ಅದು ‘ಗೋಲ್ಡನ್ ಸಿರಪ್’ ಎಂದೇ ಪ್ರಸಿದ್ಧಿ ಪಡೆದಿತ್ತು. ಕಾರ್ಖಾನೆಯಲ್ಲಿದ್ದ ಬಹುತೇಕ ಮದ್ರಾಸ್ ಪ್ರಾಂತ್ಯದ ಕೆಲಸಗಾರರು ಇದನ್ನು ಹೆಚ್ಚು ಇಷ್ಟಪಟ್ಟು ಕೊಂಡೊಯ್ಯುತ್ತಿದ್ದರು ಎಂದು ಕಾರ್ಮಿಕರು ತಿಳಿಸುತ್ತಾರೆ.
‘ಮೈಷುಗರ್ ಕಾರ್ಖಾನೆಯ ಪರಂಪರೆಯನ್ನು ಇಂದಿನ ಪೀಳಿಗೆಯ ಯುವಜನರು ಅರಿಯಬೇಕು. ಸರ್ಕಾರಿ ಸ್ವಾಮ್ಯದಲ್ಲಿ ಆರಂಭವಾದರೆ ಮಾತ್ರ ಆ ಪರಂಪರೆಯನ್ನು ಉಳಿಯಲು ಸಾಧ್ಯ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ರೈತ ಹಿತರಕ್ಷಣಾ ಸಮಿತಿ ನಾಯಕ ಕೆ.ಬೋರಯ್ಯ ಹೇಳಿದರು.
********
ಸಂಶೋಧನೆ, ಔಷಧಕ್ಕೂ ಮದ್ಯ
ಪೂರ್ಣ ಮದ್ಯ (ಅಬ್ಸಲ್ಯೂಟ್ ಆಲ್ಕೋಹಾಲ್) ಉತ್ಪಾದಿಸುವ ದೇಶದ ಏಕೈಕ ಸಂಸ್ಥೆಯಾಗಿ ಮೈಷುಗರ್ ಡಿಸ್ಟೆಲರಿ ಗುರುತಿಸಿಕೊಂಡಿತ್ತು. ಈ ಮದ್ಯವನ್ನು ದೇಶದ ವಿವಿಧ ವೈಜ್ಞಾನಿಕ ಸಂಸ್ಥೆಗಳು ಸಂಶೋಧನೆಗೆ, ಔಷಧಿ ಕಂಪನಿಗಳು ಔಷಧ ತಯಾರಿಕೆಗೆ ಖರೀದಿ ಮಾಡುತ್ತಿದ್ದವು.
ಮದ್ಯ ಅಷ್ಟೇ ಅಲ್ಲದೇ ಡಿಸ್ಟೆಲರಿಯಿಂದ ಅಸಿಟಿಕ್ ಆ್ಯಸಿಡ್ ಕೂಡ ಉತ್ಪಾದನೆಯಾಗುತ್ತಿತ್ತು. ಇದನ್ನು ಮಂಡ್ಯದಲ್ಲೇ ಇದ್ದ ಅಸಿಟೇಟ್ಸ್ ಕೆಮಿಕಲ್ಸ್ ಕಾರ್ಖಾನೆಗೆ ಸರಬರಾಜು ಮಾಡಲಾಗುತ್ತಿತ್ತು. ಡಿಸ್ಟೆಲರಿಯಿಂದ ಉತ್ಪಾದನೆಯಾಗುತ್ತಿದ್ದ ಕೈಗಾರಿಕಾ ಬಳಕೆಯ ಕಾರ್ಬನ್ ಡೈ ಆಕ್ಸೈಡ್ ಕೂಡ ಹೆಚ್ಚು ಮಾರಾಟವಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.