ADVERTISEMENT

‘ಬಗರ್‌ಹುಕುಂ’ನಲ್ಲಿ ಅಕ್ರಮ: ಲೋಕಾಯುಕ್ತ ದಾಳಿ

ನಾಲ್ವರು ಆರೋಪಿಗಳ ಮನೆ, ಕಚೇರಿಯಲ್ಲಿ ತಡರಾತ್ರಿವರೆಗೂ ಮುಂದುವರಿದ ತಪಾಸಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:08 IST
Last Updated 14 ಜನವರಿ 2026, 7:08 IST
ನಾಗಮಂಗಲ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ರೆಕಾರ್ಡ್ ರೂಂನಲ್ಲಿ ಬಗರ್ ಹುಕುಂ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು 
ನಾಗಮಂಗಲ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ರೆಕಾರ್ಡ್ ರೂಂನಲ್ಲಿ ಬಗರ್ ಹುಕುಂ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು    

ನಾಗಮಂಗಲ: ಬಗರ್ ಹುಕುಂ ಯೋಜನೆಯಡಿ ಭೂಮಿಗಾಗಿ ರೈತರು ಸಲ್ಲಿಸಲಾಗಿದ್ದ ಅರ್ಜಿಯನ್ನು ಅಕ್ರಮ ತಿದ್ದುಪಡಿ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ತಾಲ್ಲೂಕು ಕಚೇರಿ, ಆರೋಪಿಗಳ ಮನೆಗಳು ಸೇರಿದಂತೆ ಏಳು ಕಡೆಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದರು. ದಾಖಲಾತಿಗಳ ಪರಿಶೀಲನಾ ಕಾರ್ಯ ಮಂಗಳವಾರ ತಡರಾತ್ರಿವರೆಗೂ ಮುಂದುವರಿದಿದೆ.

ದರಖಾಸ್ತು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್, ಭೂ ದಾಖಲೆಗಳ ವಿಭಾಗದ ಯೋಗೇಶ್ ಹಾಗೂ ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಯೋಗೇಶ್ ಎಂಬ ಸರ್ಕಾರಿ ನೌಕರರ ಜೊತೆಗೆ ನಾಗಮಂಗಲ ಪಟ್ಟಣ ವಾಸಿ ವಸೀಂ ಉಲ್ಲಾಖಾನ್ ಬಿನ್ ಕಲೀಂಉಲ್ಲಾ ಎಂಬ ಖಾಸಗಿ ವ್ಯಕ್ತಿ ಸೇರಿ ನಾಲ್ವರು ಆರೋಪಿಗಳ ಮನೆ, ತಾಲ್ಲೂಕು ಕಚೇರಿಯ ದರಖಾಸ್ತು, ರೆಕಾರ್ಡ್ ರೂಂ ಹಾಗೂ ಕಾಂತಾಪುರ ವೃತ್ತದ ಗ್ರಾಮ ಸೇವಕನಿಗೆ ಸೇರಿದ ಕಾರು ಸೇರಿದಂತೆ ಏಳು ಕಡೆ ತಪಾಸಣೆ ನಡೆಸಿದ್ದಾರೆ. 

ದರಖಾಸ್ತು ಯೋಜನೆಯ ಸಾಗುವಳಿ, ನಕ್ಷೆ ಹಾಗೂ ವಿಸ್ತಿರ್ಣದ ಜೊತೆಗೆ ಫಲಾನುಭವಿಯ ಹೆಸರುಗಳ ದಾಖಲಾತಿಗಳನ್ನು ಮೇಲ್ಕಂಡ ನಾಲ್ವರು ಸೇರಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯ ಮುಂಭಾಗವಿರುವ ರಾಜರತ್ನ ಹೋಟೆಲ್‌ನ ವಸತಿ ಗೃಹದಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡುವ ಮೂಲಕ ಕರ್ತವ್ಯ ಲೋಪ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. 

ADVERTISEMENT

ದೇವಲಾಪುರ ಹೋಬಳಿಯ ಎಚ್‌.ಎನ್. ಕಾವಲಿನ ಗೋಮಾಳ ಸೇರಿದಂತೆ ತಾಲ್ಲೂಕಿನ ನಾನಾ ಭಾಗಗಳಲ್ಲಿನ ದಾಖಲಾತಿಗಳನ್ನು ತಮಗೆ ಬೇಕಾದವರ ಹೆಸರಿಗೆ ತಿದ್ದುಪಡಿ ಮಾಡುವ ಮೂಲಕ ಮೂಲ ಕಡತಗಳ ಮಧ್ಯದಲ್ಲಿ ಸೇರಿಸಿ ತಹಶೀಲ್ದಾರ್ ಸೇರಿದಂತೆ ಬಗರ್‌ಹುಕುಂ ಸಮಿತಿಯಲ್ಲಿ ಮಂಜೂರು ಆಗುವಂತೆ ನೋಡಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

‘ತನಿಖೆ ಮಾಡಿದಷ್ಟು ಭ್ರಷ್ಟಾಚಾರ ಪತ್ತೆ’

‘ತನಿಖೆ ಮಾಡಿದಷ್ಟು ಭ್ರಷ್ಟಾಚಾರದ ವ್ಯಾಪ್ತಿ ದೊಡ್ಡದಾಗುತ್ತಿದೆ. ಇಂದು ತಡರಾತ್ರಿಯಾದರೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಪರಿಶೀಲನಾ ಕಾರ್ಯ ಸಂಪೂರ್ಣವಾದ ನಂತರ ದಾಖಲಾತಿಗಳನ್ನು ನಿಯಮಾನುಸಾರ ವಶಕ್ಕೆ ಪಡೆಯಲಾಗುತ್ತದೆ. ಅಗತ್ಯವಿದ್ದರೆ ಆರೋಪಿಗಳನ್ನು ವಶಕ್ಕೆ ಪಡೆಯುವ ಬಗ್ಗೆ ಮೇಲಾಧಿಕಾರಿಗಳ ಆದೇಶದನ್ವಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್‌ ಬಾಬು ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.