ADVERTISEMENT

ನಾಗಮಂಗಲ | ತಿಳಿವಳಿಕೆಯ ಕೊರತೆ: ಅಳಿವಿನಂಚಿನಲ್ಲಿ ಐತಿಹಾಸಿಕ ಶಾಸನ, ಸ್ಮಾರಕ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:28 IST
Last Updated 2 ಮಾರ್ಚ್ 2026, 5:28 IST
ನಾಗಮಂಗಲ ತಾಲ್ಲೂಕಿನ ಕೆಲಗೆರೆಯಲ್ಲಿರುವ ಇತಿಹಾಸ ಪ್ರಸಿದ್ಧ ವೀರಗಲ್ಲುಗಳು, ಮಹಾಸತಿ ಕಲ್ಲುಗಳು
ನಾಗಮಂಗಲ ತಾಲ್ಲೂಕಿನ ಕೆಲಗೆರೆಯಲ್ಲಿರುವ ಇತಿಹಾಸ ಪ್ರಸಿದ್ಧ ವೀರಗಲ್ಲುಗಳು, ಮಹಾಸತಿ ಕಲ್ಲುಗಳು   

ನಾಗಮಂಗಲ: ದೇವಾಲಯಗಳು ನಾಡು ಎಂಬ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ತಾಲ್ಲೂಕಿನ ಭವ್ಯ ಇತಿಹಾಸವನ್ನು ಸಾರುವ ಪುರಾತನ ಕಾಲದ ವಿವಿಧ ಕಾಲಘಟ್ಟಗಳ ನೂರಾರು ವೀರಗಲ್ಲುಗಳು, ಮಹಾಸತಿಕಲ್ಲುಗಳು, ಶಾಸನಗಳು ಅನಾಥವಾಗಿ ಬಿದ್ದಿದ್ದು, ಐತಿಹಾಸಿಕ ಹಿನ್ನೆಲೆಯೂ ಕಣ್ಮರೆಯಾಗುತ್ತಿದೆ.

ತಾಲ್ಲೂಕಿನಲ್ಲಿ ಹೊಯ್ಸಳರು, ಗಂಗರು, ಚೋಳರು, ವಿಜಯನಗರ ಸಾಮ್ಯಾಜ್ಯದ ಅರಸರು ಆಯಾ ಕಾಲಘಟ್ಟದಲ್ಲಿ ಆಡಳಿತ ನಡೆಸಿದ್ದು, ಆ ಕಾಲದ ಇತಿಹಾಸ ಸಾರುವ ನೂರಾರು ವೀರಗಲ್ಲು, ಮಹಾಸತಿ ಕಲ್ಲುಗಳು, ಶಾಸನಗಳು ತಾಲ್ಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಗಳಲ್ಲಿ, ಪುರಾತನ ದೇವಾಲಯಗಳ ಬಳಿ ಇಂದಿಗೂ ಇತಿಹಾಸದ ಸಾಕ್ಷಿಗುಡ್ಡೆಗಳಾಗಿ ಜೀವಂತವಾಗಿವೆ. ಆದರೆ ತಮ್ಮ ಗ್ರಾಮಗಳ, ಪೂರ್ವಜರು, ವಂಶಸ್ಥರು, ಇತಿಹಾಸ ಪುರುಷರು ಸೇರಿದಂತೆ ಅವರ ಸಾಧನೆಯ ಮೇಲೆ ಬೆಳಕು ಚೆಲ್ಲುವ ಆ ಆಧಾರಗಳ ಕುರಿತು ಜನರಲ್ಲಿ ಸರಿಯಾದ ತಿಳಿವಳಿಕೆ ಇಲ್ಲದೇ ಹೋಗಿರುವುದರಿಂದ ಸಂರಕ್ಷಣೆಗೆ ಮುಂದಗುತ್ತಿಲ್ಲ. ಆದ್ದರಿಂದ ಕಾಲಘಟ್ಟದಲ್ಲಿ ಹುದುಗಿಹೋಗುವ ಆತಂಕ ಎದುರಾಗಿದೆ. ಆದರೆ ಅಪವಾದ ಎಂಬಂತೆ ಕೆಲ ಗ್ರಾಮಗಳಲ್ಲಿ ಇತಿಹಾಸ ಪ್ರಜ್ಞೆ ಹಾಗೂ ಶಾಸನ, ವೀರಗಲ್ಲುಗಳ ಮಹತ್ವದ ಅರಿವಿರುವ ಕೆಲ ಯುವಕರು ತಮ್ಮ ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟು ವೀರಗಲ್ಲು ಮಹಾಸತಿಕಲ್ಲುಗಳನ್ನು ರಕ್ಷಣೆ ಮಾಡಿರುವ ಉದಾಹರಣೆಗಳು ಇವೆ.

ತಾಲ್ಲೂಕಿನ ಹಲವೆಡೆ ಏಕಾದಶಿ ಸೇರಿದಂತೆ ಪಿತೃಪಕ್ಷದ ಸಮಯದಲ್ಲಿ ಜನರು ತಮ್ಮ ವಂಶಕ್ಕೆ ಸೇರಿದ ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳನ್ನು ನೆನಪಿಸಿಕೊಂಡು ಪೂಜೆ ನೆರವೇರಿಸುವುದನ್ನು ಬಿಟ್ಟರೆ ಅವುಗಳ ರಕ್ಷಣೆಗೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

ADVERTISEMENT

ರಕ್ಷಣೆಗೆ ಹಲವರ ಪ್ರಯತ್ನ: ಪಟ್ಟಣದ ಟಿಬಿ ಬಡಾವಣೆಯ ಗಣೇಶ ದೇವಾಲಯದ ಹಿಂಭಾಗ ಗಂಗರ ಕಾಲದ ತಾಲ್ಲೂಕಿನ ಕುರಿತು ಮಾಹಿತಿ ನೀಡುವ ಬಹು ಅಪರೂಪದ ವೀರಗಲ್ಲೊಂದರಲ್ಲಿ ಗೋವುಗಳ ರಕ್ಷಣೆಗಾಗಿ ಶತ್ರುಗಳೊಂದಿಗೆ ಹೋರಾಡಿ ಪ್ರಾಣಾರ್ಪಣೆ ಮಾಡಿದ ಅಕ್ಕಯ್ಯ ಎಂಬ ಇತಿಹಾಸ ಪುರುಷನ ಮಾಹಿತಿಯಿತ್ತು. ಅದು ನಿರ್ಲಕ್ಷ್ಯಕ್ಕೆ ಒಳಗಾಗಿ ನೆಲಕ್ಕೆ ಬಿದ್ದು ಹಾಳಾಗುವ ಹಂತ ತಲುಪಿತ್ತು. ಕೆಲ ವರ್ಷಗಳ ಹಿಂದೆ ಪಟ್ಟಣದ ಆದಿಚುಂಚನಗಿರಿ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ಭೈರೇಗೌಡ ಅವರು ಅದರ ಮಹತ್ವವನ್ನು ಅರಿತು ವಿದ್ಯಾರ್ಥಿಗಳ ಜೊತೆ ಸೇರಿ ಅದೇ ಜಾಗದಲ್ಲಿ ಕಾಂಕ್ರೀಟ್ ಅಳವಡಿಸಿ ಕುಸಿಯದಂತೆ ಅದನ್ನು ಸಂರಕ್ಷಿಸುವ ಕೆಲಸವನ್ನು ಮಾಡಿದ್ದರು. ಉಪ್ಪಾರಹಳ್ಳಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಬಿದ್ದಿದ್ದ ವೀರಗಲ್ಲೊಂದನ್ನು ಕಾಲೇಜಿನ ಆವರಣಕ್ಕೆ ತಂದು ಸಂರಕ್ಷಣೆ ಮಾಡಿದ್ದು, ಇಂದು ಸಹ ಅದು ಜೀವಂತವಾಗಿ ಉಳಿದಿದೆ.

ಇತಿಹಾಸ ತಜ್ಞರಾದ ಕಲೀಂ ಉಲ್ಲ, ಶಿಕ್ಷಕರಾದ ತಿಮ್ಮರಾಯೀಗೌಡ ಅವರು ತಾಲೂಕಿನಾದ್ಯಂತ ಸಂಚರಿಸಿ ಇತಿಹಾಸದ ಮಾಹಿತಿಗಳನ್ನು ದಾಖಲಿಸುವ ಜೊತೆಗೆ ಇತಿಹಾಸ ಸಾರುವ ವೀರಗಲ್ಲು, ಮಹಾಸತಿ ಕಲ್ಲು ಸೇರಿದಂತೆ ಶಾಸನಗಳ ಮಹತ್ವ ಮತ್ತು ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ.

ಅವನತಿಯತ್ತ ಶಾಸನಗಳು: ತಾಲ್ಲೂಕಿನಲ್ಲಿ ಗಂಗರ ಕಾಲದ 4 ಶಾಸನ, ಹೊಯ್ಸಳರ ಕಾಲದ 46 ಶಾಸನ, ವಿಜಯ ನಗರದ ಕಾಲದ 19 ಶಾಸನ, ಮೈಸೂರು ಒಡೆಯರ 3 ಶಾಸನಗಳು ಸೇರಿದಂತೆ 185 ಶಾಸನಗಳನ್ನು ಇಲ್ಲಿಯವರೆಗೆ ಪತ್ತೆ ಹಚ್ಚಲಾಗಿದೆ. ನಾಡಿಗಾಗಿ ಹೋರಾಡಿ ಪ್ರಾಣ ಬಿಟ್ಟ ವೀರರ ಇತಿಹಾಸವನ್ನು ಸಾರುವ ವೀರಗಲ್ಲುಗಳ ಜೊತೆಗೆ ಸಹಗಮನಕ್ಕೆ ಒಳಗಾದ ಸಾವಿರಾರು ಸತಿಯರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹಾಸತಿಕಲ್ಲುಗಳು ಅನಾಥವಾಗಿವೆ.

ವಿವಿಧ ಕಾಲಘಟ್ಟಗಳಲ್ಲಿ ತಾಲ್ಲೂಕಿನಲ್ಲಿ ಆಡಳಿತ ನಡೆಸಿದ ವಿವಿಧ ರಾಜ ಮನೆತನಗಳು ಮತ್ತು ಆಡಳಿತದ ಹಿನ್ನೆಲೆಯನ್ನು ತಿಳಿಸುವ ವೀರಗಲ್ಲು ಮತ್ತು ಶಾಸನಗಳಿಗೆ ರಕ್ಷಣೆಯಿಲ್ಲದೇ ತಾಲ್ಲೂಕಿನ ಮದಲಹಳ್ಳಿ, ಬೋಗಾದಿ, ತಿಬ್ಬನಹಳ್ಖಿ, ಬೆಳ್ಳೂರು, ಲಾಳನಕರೆ, ದೇವಲಾಪುರ, ಬೆಟ್ಟದಮಲ್ಲೇನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಬದಿಯಲ್ಲಿ ಬಿದ್ದಿವೆ. ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.

ಕೆಲಗೆರೆ ಗ್ರಾಮದ ಬಸವಣ್ಣನ ಗುಡಿಯ ಪಕ್ಕದ ಕಟ್ಟೆಯ ಮೇಲೆ ಹತ್ತಾರು ವೀರಗಲ್ಲುಗಳಿದ್ದು, ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಮತ್ತು ಆಕರ್ಷಕವಾಗಿ ಕಾಣುವ ವೀರಗಲ್ಲುಗಳಿವೆ. ಆದರೆ ಸ್ಥಳೀಯ ಆಡಳಿತ ಸೇರಿದಂತೆ ಗ್ರಾಮದ ಜನರು ಅವುಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡದಿರುವುದರಿಂದ ಅನಾಥವಾಗಿವೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಹಾನಿಯಾಗುವ ಅಪಾಯವೂ ಇದೆ.

ರಕ್ಷಿಸುವ ಜವಾಬ್ದಾರಿ ಎಲ್ಲರದ್ದು ನಾಡಿನ ಇತಿಹಾಸ ಸಾರುವ ಸ್ಮಾರಕಗಳನ್ನು ಕೇವಲ ಸರ್ಕಾರ ಮಾತ್ರವೇ ರಕ್ಷಣೆ ಮಾಡಬೇಕು ಎಂಬುದು ಸರಿಯಲ್ಲ. ನಮ್ಮ ಇತಿಹಾಸವನ್ನು ಸಾರುವ ಕುರುಹುಗಳನ್ನು ಜನರೇ ಜವಾಬ್ದಾರಿಯಿಂದ ರಕ್ಷಣೆ ಮಾಡಬೇಕಿದೆ. ವೀರಗಲ್ಲು, ಮಹಾಸತಿ ಕಲ್ಲುಗಳು ಆಯಾ ಗ್ರಾಮಗಳ ಹೆಮ್ಮೆಯ ಪ್ರತೀಕವಾಗಿದ್ದು, ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಅವುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ - ಕಲೀಂ ಉಲ್ಲಾ, ಇತಿಹಾಸ ತಜ್ಞ ನಾಗಮಂಗಲ

ಸ್ಮಾರಕಗಳ ರಕ್ಷಣೆಯಾಗಲಿ

ಸ್ಮಾರಕ, ಶಾಸನಗಳು ನಮ್ಮ ಸಂಸ್ಕೃತಿ, ಪರಂಪರೆಯ ಭಾಗವಾಗಿವೆ. ದುರಾದೃಷ್ಟವಶಾತ್ ಅವುಗಳ ಬಗ್ಗೆ ಸರಿಯಾದ ಅರಿವಿನ ಕೊರತೆಯಿಂದ ಕೆಲವರು ದುರುಪಯೋಗ ಮಾಡಿಕೊಂಡರೆ ಅವುಗಳ ಮೌಲ್ಯವನ್ನು ಅರಿತವರು ಕಳ್ಳತನ ಮಾಡಿ ಬೇರೆಡೆಗೆ ಮಾರಲು ಪ್ರಯತ್ನಿಸಿದ್ದಾರೆ. ಪಾಳು ಬಿದ್ದ ದೇವಾಲಯಗಳಲ್ಲಿ ನಿಧಿ ಆಸೆಗಾಗಿ ಅಗೆದು ಹಾಳು ಮಾಡಲಾಗಿದೆ. ಇಂದು ಹೊಸ ದೇವಾಲಯ, ಮಸೀದಿ, ಚರ್ಚ್ ಗಳನ್ನು ನಿರ್ಮಾಣ ಮಾಡುವ ಬದಲು ಇರುವ ಐತಿಹಾಸಿಕ ದೇವಾಲಯಗಳನ್ನು ರಕ್ಷಣೆ ಮಾಡಬೇಕಾಗಿದೆ. ಮುಂದಾದರೂ ನಮ್ಮ ಕಣ್ಣಿಗೆ ಬಿದ್ದ ಸ್ಮಾರಕಗಳ ರಕ್ಷಣೆಯನ್ನು ಮಾಡಬೇಕಾಗಿದೆ - ತಿಮ್ಮರಾಯಿಗೌಡ, ಸಾಹಿತಿ, ನಾಗಮಂಗಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.