ADVERTISEMENT

ನಾಗಮಂಗಲ| ಸರ್ಕಾರಿ ಜಾಗ ಕಬಳಿಕೆ: ಇಬ್ಬರು ಶಿರಸ್ತೇದಾರ್ ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:50 IST
Last Updated 14 ಜನವರಿ 2026, 15:50 IST
<div class="paragraphs"><p>ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ದಾಖಲೆ ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು</p></div>

ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ದಾಖಲೆ ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು

   

ಮಂಡ್ಯ: ‘ರೆಕಾರ್ಡ್ ರೂಮ್‌ನಲ್ಲಿದ್ದ ಮೂಲ ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೆ ₹200 ಕೋಟಿ ನಷ್ಟ ಉಂಟು ಮಾಡಿದ್ದಾರೆ’ ಎಂಬ ಆರೋಪದ ಮೇರೆಗೆ ಇಬ್ಬರು ಶಿರಸ್ತೇದಾರ್‌ ಸೇರಿ ಐವರು ಸರ್ಕಾರಿ ನೌಕರರನ್ನು ನಾಗಮಂಗಲ ಪಟ್ಟಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ನಾಗಮಂಗಲ ತಾಲ್ಲೂಕು ಕಚೇರಿಯ ಶಿರಸ್ತೇದಾರ್‌ಗಳಾದ ರವಿಶಂಕರ್‌, ಉಮೇಶ್‌, ದ್ವಿತೀಯ ದರ್ಜೆ ಸಹಾಯಕರಾದ ಸತೀಶ್‌ ಎಚ್‌.ವಿ., ಗುರುಮೂರ್ತಿ ಮತ್ತು ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಎಸ್‌.ಯೋಗೇಶ್‌ ಬಂಧಿತರು. ಈ ಐವರೊಂದಿಗೆ ದ್ವಿತೀಯ ದರ್ಜೆ ಸಹಾಯಕರಾದ ಯೋಗೇಶ್‌, ವಿಜಯ್‌ಕುಮಾರ್‌, ಯಶವಂತ್‌, ಮೈಸೂರಿನ ಪತ್ರ ಬರಹಗಾರ ಚಿನ್ನಸ್ವಾಮಿ, ಮಹಮ್ಮದ್‌ ವಸೀಂ ಉಲ್ಲಾ ಸೇರಿ ಒಟ್ಟು 10 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ನಸುಕಿನವರೆಗೂ ಕಾರ್ಯಾಚರಣೆ: ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು ಮಾಡಿ, ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ದೂರುಗಳನ್ನು ಆಧರಿಸಿ ಮಂಡ್ಯ ಲೋಕಾಯುಕ್ತ ಪೊಲೀಸರು ಮಂಗಳವಾರ ಶೋಧ ಕಾರ್ಯ ನಡೆಸಿದರು. ಮಂಗಳವಾರ ಮಧ್ಯಾಹ್ನ 1ರಿಂದ ಬುಧವಾರ ನಸುಕಿನ 5 ಗಂಟೆವರೆಗೆ ಶೋಧ ಕಾರ್ಯ ನಡೆಸಿ ಅಕ್ರಮವನ್ನು ಸಾಕ್ಷಿ ಸಮೇತ ಬಯಲಿಗೆಳೆದಿದ್ದಾರೆ.

ನಾಗಮಂಗಲ ತಾಲ್ಲೂಕು ಕಚೇರಿ, ಆರೋಪಿತ ನೌಕರರ ಮನೆಗಳು, ಜೆರಾಕ್ಸ್‌ ಸೆಂಟರ್‌, ಮೈಸೂರು ನಗರದ ಅಗ್ರಹಾರದ ‘ಹೋಟೆಲ್‌ ರಾಜರತ್ನ’ ಸೇರಿ ಒಟ್ಟು ಏಳು ಕಡೆ ಏಕಕಾಲದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಹೋಟೆಲ್‌ ಕ್ಯಾಶ್‌ ಕೌಂಟರ್‌ ಟೇಬಲ್‌ನಲ್ಲಿ ನಾಗಮಂಗಲ ತಾಲ್ಲೂಕು ಕಚೇರಿಗೆ ಸಂಬಂಧಿಸಿದ ದಾಖಲೆಗಳು, ಜಮೀನು ಮಂಜೂರಾತಿಗೆ ಸಂಬಂಧಿಸಿದ ಖಾಲಿ ನಮೂನೆಗಳು, ತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರ ಹೆಸರಿನ ರಬ್ಬರ್‌ ಸೀಲ್‌ಗಳು ಪತ್ತೆಯಾಗಿವೆ. ಮನೆ ಮತ್ತು ಕಚೇರಿಗಳಲ್ಲಿ ನಕಲಿ ಚಲನ್‌ಗಳು, ಖಾಲಿ ಚೆಕ್‌, ಸಾಗುವಳಿ ಚೀಟಿ, ತಿಳಿವಳಿಕೆ ನೋಟಿಸ್‌ ಹಾಗೂ ನಕಲಿ ದಾಖಲೆಗಳು ಸಿಕ್ಕಿವೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.

320 ಎಕರೆ ಗುಳುಂ: ‘ನಾಗಮಂಗಲ ತಾಲ್ಲೂಕಿನಲ್ಲಿ ಸುಮಾರು 50 ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದ 320ಕ್ಕೂ ಹೆಚ್ಚು ಎಕರೆ ಸರ್ಕಾರಿ ಜಾಗ ಮತ್ತು ಗೋಮಾಳವನ್ನು ಬಗರ್‌ಹುಕುಂ ಸಾಗುವಳಿ ಯೋಜನೆಯಡಿ ಅಕ್ರಮವಾಗಿ ಕಬಳಿಸಿದ್ದಾರೆ. ಹಣ ಪಡೆದುಕೊಂಡು 5 ಎಕರೆ, 8 ಎಕರೆ, 10 ಎಕರೆಯಂತೆ ಭೂಮಿ ಮಂಜೂರು ಮಾಡಿಕೊಟ್ಟಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶ ಹೊರಬರಲಿದೆ’ ಎಂದು ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘5 ವರ್ಷಗಳಿಂದ ನಕಲಿ ದಾಖಲೆ ಸೃಷ್ಟಿ’

ಗ್ರಾಮ ಸಹಾಯಕ ಎಸ್‌. ಯೋಗೇಶ್‌ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ‘ಎಸ್‌ಡಿಎಗಳಾದ ಯೋಗೇಶ್‌, ಸತೀಶ್‌, ಪತ್ರ ಬರಹಗಾರ ಚಿನ್ನಸ್ವಾಮಿ, ಯಶವಂತ್‌, ವಿಜಯ್‌ಕುಮಾರ್‌ ಅವರು ಸೇರಿ 2020ನೇ ಸಾಲಿನಿಂದ ಈವರೆಗೆ ಈ ಕೃತ್ಯ ಎಸಗಿದ್ದಾರೆ. ಸರ್ಕಾರಿ ಜಮೀನು ಹಾಗೂ ಗೋಮಾಳವನ್ನು ಮಂಜೂರು ಮಾಡಿಸಿಕೊಡುವ ಉದ್ದೇಶದಿಂದ ನಕಲಿ ಸಾಗುವಳಿ ಚೀಟಿಗಳನ್ನು ಸೃಷ್ಟಿಸಿದ್ದಾರೆ. ನಕಲಿ ಸೀಲ್‌ ಮತ್ತು ನಕಲಿ ಸಹಿಗಳನ್ನು ಮಾಡಿ ತಾಲ್ಲೂಕು ಕಚೇರಿಯ ಅಭಿಲೇಖಾಲಯದ ದಾಖಲೆಗಳೊಂದಿಗೆ ಸೇರಿಸಲಾಗುತ್ತಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.