ಮಂಡ್ಯ: ‘ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಜೆ. ರವಿ ಹಾಗೂ ಗುಪ್ತಚರ ವಿಭಾಗದ ಕಾನ್‌ಸ್ಟೆಬಲ್ ರಮೇಶ್ ಅವರನ್ನು ಅಮಾನತು ಮಾಡಲಾಗಿದೆ.
ಕರ್ತವ್ಯ ಲೋಪ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶದಲ್ಲಿ ತಿಳಿಸಿದ್ದಾರೆ.
ಸೆ.11ರಂದು ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ಯುವಕರ ನಡುವೆ ಸಂಘರ್ಷ ಉಂಟಾಗಿ ಸಾಕಷ್ಟು ಆಸ್ತಿಪಾಸ್ತಿಗೆ ಹಾನಿ ಉಂಟಾಗಿತ್ತು. ಘಟನೆಯ ಬಗ್ಗೆ ಪಿಎಸ್‌ಐ ಬಿ.ಜೆ. ರವಿ ದೂರು ನೀಡಿದ್ದರು. ಇದೀಗ ದೂರು ನೀಡಿದ್ದ ಅಧಿಕಾರಿಯನ್ನೇ ಅಮಾನತು ಮಾಡಿರುವುದರಿಂದ ಪ್ರಕರಣ ಹೊಸ ತಿರುವು ಪಡೆದಂತಾಗಿದೆ.
ಇದಕ್ಕೂ ಮೊದಲು, ಡಿವೈಎಸ್ಪಿ ಸುಮಿತ್, ಇನ್‌ಸ್ಪೆಕ್ಟರ್ ಅಶೋಕ್‌ಕುಮಾರ್ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಒಟ್ಟು ನಾಲ್ವರು ಪೊಲೀಸರು ಅಮಾನತುಗೊಂಡಂತಾಗಿದೆ.
ಪ್ರಕರಣದ ಎಲ್ಲ 55 ಆರೋಪಿಗಳಿಗೂ ಮಂಡ್ಯದ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಈಚೆಗೆ ಜಾಮೀನು ಮಂಜೂರು ಮಾಡಿದ್ದು, ಕಾರಾಗೃಹದಿಂದ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.