ADVERTISEMENT

ನಾಗಮಂಗಲ: ಯೋಗಾನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:00 IST
Last Updated 12 ಮೇ 2025, 13:00 IST
ನಾಗಮಂಗಲ ಪಟ್ಟಣದ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಸೋಮವಾರ ನಡೆದ ಬ್ರಹ್ಮ ರಥೋತ್ಸವದಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು
ನಾಗಮಂಗಲ ಪಟ್ಟಣದ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಸೋಮವಾರ ನಡೆದ ಬ್ರಹ್ಮ ರಥೋತ್ಸವದಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು   

ನಾಗಮಂಗಲ: ಪಟ್ಟಣದ ಪಟ್ಟಣದ ಮೊದಲ ದೇವಾಲಯ ಹೆಗ್ಗಳಿಕೆಗೆ ಪಾತ್ರವಾಗಿರುವ ಯೋಗಾನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಜರುಗಿತು.

ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಯದ ಹಿಂಭಾಗದಲ್ಲಿರುವ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಮೂರು ದಿನಗಳಿಂದ ದೇವಾಲಯದಲ್ಲಿ ಗರುಡ ಧ್ವಜಾರೋಹಣ ಮಾಡುವ ಮೂಲಕ ಪ್ರಾರಂಭಗೊಂಡು ಮುಡಿಸೇವೆ, ವಿಶೇಷ ಕೈಂಕರ್ಯ, ಶೇಷವಾಹನೋತ್ಸವ, ಸಿಂಹವಾಹನೋತ್ಸವ, ಗಜವಾಹನೋತ್ಸವಗಳನ್ನು ಆಯೋಜಿಸಲಾಗಿತ್ತು.

ನರಸಿಂಹ ಜಯಂತಿ ಪ್ರಯುಕ್ತ ಮೂಲ ದೇವರಿಗೆ ಅಭಿಷೇಕ ಮತ್ತು ಶ್ರೀದೇವಿ, ಭೂದೇವಿಯರೊಂದಿಗೆ ಶಾಸ್ತ್ರೋಕ್ತವಾಗಿ ಕಲ್ಯಾಣೋತ್ಸವ, ಊಂಜಲ ಸೇವೆ, ಪ್ರಸನ್ನ ಗರುಡೋತ್ಸವ ಮತ್ತು ಗಜೇಂದ್ರ ಪರಿಪಾಲನೋತ್ಸವಗಳು ಸಂಪ್ರದಾಯ ಬದ್ಧವಾಗಿ ಜರುಗಿದವು.

ADVERTISEMENT

ಸೋಮವಾರ ಬೆಳಿಗ್ಗೆಯಿಂದಲೇ ಪ್ರಾಕಾರದಲ್ಲಿರುವ ಧ್ವಜ ಸ್ತಂಭ, ಸುಗ್ರೀವ, ಸುದರ್ಶನ, ರಾಮಾನುಜ, ಹನುಮಂತ, ಅಶ್ವತ್ಥ ಕಟ್ಟೆ ಸೀತಾರಾಮರ ಮತ್ತು ಅಮ್ಮನವರ ಸನ್ನಿದಿ ಬಳಿ ಪ್ರಾಕಾರೋತ್ಸವ ಜರುಗಿತು. ನರಸಿಂಹ ದೇವರಿಗೆ ಪುಷ್ಪ ಕೈಂಕರ್ಯದೊಂದಿಗೆ ಬ್ರಹ್ಮ ರಥೋತ್ಸವಕ್ಕೆ ಅಣಿಗೊಳಿಸಿದ್ದ ರಥದಲ್ಲಿ ಯೋಗಾನರಸಿಂಹ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೂರಿಸಿ ಪೂಜೆ ನೆರವೇರಿಸಿದ ನಂತರ ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು.

ಸಾವಿರಾರು ಭಕ್ತರು ಪೂಜೆ ನೆರವೇರಿಸಿ ರಥವನ್ನು ಎಳೆದು ಸಂಭ್ರಮಿಸಿದರು. ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿನ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ದೇವಾಲಯದ ಆವರಣದಲ್ಲಿ ಹೋಮಹವನಗಳು ಜರುಗಿದವು. ಅಲ್ಲದೇ ವೇದಘೋಷವನ್ನು ಪಠನೆ ಮಾಡಲಾಯಿತು. ಜೊತೆಗೆ ಭಕ್ತರಿಗಾಗಿ ಅಲ್ಲಲ್ಲಿ ಪಾನಕ, ಮಜ್ಜಿಗೆ ಸೇರಿದಂತೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.