ADVERTISEMENT

‘ಕೋವಿಡ್‌: ಮಂಡ್ಯ ಜಿಲ್ಲೆಯ ಜನ ಭಯಪಡಬೇಕಿಲ್ಲ’

​ಪ್ರಜಾವಾಣಿ ವಾರ್ತೆ
Published 20 ಮೇ 2020, 16:32 IST
Last Updated 20 ಮೇ 2020, 16:32 IST
ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ನಾರಾಯಣಗೌಡ ಮಾತನಾಡಿದರು
ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ನಾರಾಯಣಗೌಡ ಮಾತನಾಡಿದರು   

ನಾಗಮಂಗಲ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಭಯಪಡುವ ಅಗತ್ಯವಿಲ್ಲ. ಮುಂಬೈಯಿಂದ ಬರುವ ವಲಸಿಗರನ್ನು ಗಡಿಯಲ್ಲೇ ತಡೆದು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಯಾರೂ ಮಾನಸಿಕವಾಗಿ ಕುಗ್ಗುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಮುಂಬೈನಿಂದ ಬಂದವರನ್ನು ಸುರಕ್ಷತಾ ಕ್ರಮಗಳ ಮೂಲಕ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾ ಗುತ್ತಿದೆ. ಬರುತ್ತಿರುವವರೆಲ್ಲಾ ಈ ನೆಲದ ಮಕ್ಕಳೇ. ಅವರಿಗೆ ಕ್ವಾರಂಟೈನ್ ಸೌಲಭ್ಯ ನೀಡಿ ಬೆಂಬಲವಾಗಿ ನಿಲ್ಲುವುದು ನಮ್ಮ ಜವಾಬ್ದಾರಿ. ಕ್ವಾರಂಟೈನ್ ಸೌಲಭ್ಯಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ’ ಎಂದು ಹೇಳಿದರು.

ADVERTISEMENT

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಸರ್ಕಾರದ ನಿಯಮಕ್ಕೆ ಅನುಗುಣವಾಗಿ ಮುಂಬೈಯಿಂದ ತವರಿಗೆ ಈಗಾಗಲೇ ಜನರು ಬಂದಿದ್ದಾರೆ. ಅವರನ್ನು ಸೂಕ್ತವಾಗಿ ಮುಂಜಾಗ್ರತಾ ಕ್ರಮ ಮತ್ತು ಅಂತರ ಕಾಪಾಡುವ ನಿಯಮವನ್ನು ಪಾಲಿಸಿ ಕ್ವಾರಂಟೈನ್ ಮಾಡಬೇಕು. ಜನರಿಗೆ ಹೊರಗಿನಿಂದ ಬಂದವರಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಾಗೃತಿ ವಹಿಸ ಬೇಕು. ಜಿಲ್ಲಾಡಳಿತ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಸುರೇಶ್ ಗೌಡ ಅಸಮಾಧಾನ: ‘ಮುಂಬೈಯಿಂದ ಬರುತ್ತಿರುವವರನ್ನು‌ ಮೊದಲೇ ಕೋವಿಡ್ ಪರೀಕ್ಷೆ ಮಾಡಿ ಜಿಲ್ಲೆ ಕರೆತರಬೇಕಾಗಿತ್ತು. ಆದರೆ, ಕುರಿಗಳಂತೆ ತಂದು ಕ್ವಾರಂಟೈನ್ ಮಾಡ ಲಾಗುತ್ತಿದೆ. ವಸತಿ‌ನಿಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸುರಕ್ಷತೆಗಾಗಿ ಪಿಪಿಇ ಕಿಟ್, ಮಾಸ್ಕ್‌ ಯಾವುದನ್ನು ನೀಡಿಲ್ಲ. ಇದು ಯಾವ ಉದ್ದೇಶದಿಂದ ಕರೆದ ಸಭೆಯೋ ನನಗೆ ಗೊತ್ತಿಲ್ಲ’ ಎಂದು ಶಾಸಕ ಸುರೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಸಿ.ಎಸ್. ಪುಟ್ಟರಾಜು, ಶ್ರೀನಿವಾಸ್, ಅಪ್ಪಾಜಿಗೌಡ, ಕೆ. ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಎಸ್‌ಪಿ ಕೆ.ಪರಶುರಾಮ್, ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.