ಶ್ರೀರಂಗಪಟ್ಟಣ: 39ನೇ ರಾಷ್ಟ್ರೀಯ ಬಾಲಕಿಯರ ಸಬ್ ಜೂನಿಯರ್ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್ ಏ. 30ರಿಂದ ಮೇ 4ರವರೆಗೆ ಪಟ್ಟಣದಲ್ಲಿ ನಡೆಯಲಿದೆ ಎಂದು ಹ್ಯಾಂಡ್‌ಬಾಲ್ ತರಬೇತುದಾರ ಆರ್. ರಾಘವೇಂದ್ರ ತಿಳಿಸಿದರು.
ಪಟ್ಟಣದಲ್ಲಿ ನಡೆದ ರೋಟರಿ ಕ್ಲಬ್, ಆಚೀವರ್ಸ್ ಅಕಾಡೆಮಿ ಮತ್ತು ಉದ್ಯೋಗದಾತ ಸಂಸ್ಥೆಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್, ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್, ರೋಟರಿ ಕ್ಲಬ್, ಉದ್ಯೋಗದಾತ ಸಂಸ್ಥೆ ಹಾಗೂ ಆಚೀವರ್ಸ್ ಅಕಾಡೆಮಿ ಸಹಯೋಗದಲ್ಲಿ ಹ್ಯಾಂಡ್ ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುವ ಈ ಟೂರ್ನಿಯಲ್ಲಿ ವಿವಿಧ ರಾಜ್ಯಗಳ 26 ತಂಡಗಳು ಪಾಲ್ಗೊಳ್ಳಲಿವೆ. 15 ವರ್ಷದ ಒಳಗಿನ 600 ಆಟಗಾರ್ತಿಯರು ಭಾಗವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಪಿ. ಮಂಜುರಾಂ ಮಾತನಾಡಿ, ‘ರಾಷ್ಟ್ರ ಮಟ್ಟದ ಈ ಟೂರ್ನಿಯಲ್ಲಿ ವಿಜೇತರಾಗುವ ತಂಡಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಪ್ರತಿಭಾವಂತರನ್ನು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾಗುವುದು. ಪಟ್ಟಣದಲ್ಲಿ ನಡೆಯುವ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡ ಈಗಾಗಲೇ ಪಟ್ಟಣಕ್ಕೆ ಆಗಮಿಸಿದ್ದು ತರಬೇತಿ ನೀಡಲಾಗುತ್ತದೆ. ಎಲ್ಲ ಸ್ಪರ್ಧಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
ಉದ್ಯೋಗದಾತ ಸಂಸ್ಥೆ ಮುಖಸ್ಥ ಡಿ.ಬಿ. ರುಕ್ಮಾಂಗದ, ರೋಟರಿ ಕ್ಲಬ್ ಸದಸ್ಯ ಚಂದಗಾಲು ನಾಗೇಂದ್ರು ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.