ADVERTISEMENT

ವರ್ಮಾ ಸಮಿತಿ ಶಿಫಾರಸು ಜಾರಿಗೆ ಒತ್ತಾಯ

ಜನವಾದಿ ಮಹಿಳಾ ಸಂಘಟನೆಯ ಸಮ್ಮೇನದ ಅಧಿವೇಶನದಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:51 IST
Last Updated 31 ಜುಲೈ 2019, 14:51 IST
ಜನವಾದಿ ಮಹಿಳಾ ಸಂಘಟನೆಯ ಅಧಿವೇಶನದಲ್ಲಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು
ಜನವಾದಿ ಮಹಿಳಾ ಸಂಘಟನೆಯ ಅಧಿವೇಶನದಲ್ಲಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು   

ಮಂಡ್ಯ: ‘ಮಹಿಳೆಯ ವಿರುದ್ಧ ನಡೆಯುವ ದೌರ್ಜನ್ಯ ತಡೆಯಲು ನ್ಯಾಯಮೂರ್ತಿ ಜೆ.ಎಸ್‌.ವರ್ಮಾ ಸಮಿತಿ ಶಿಫಾರಸುಗಳನ್ನು ಸರ್ಕಾರ ಕಟ್ಟಿನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮಟ್ಟದ 10ನೇ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದ ಎಸ್‌.ಬಿ.ಸಮುದಾಯ ಭವನದಲ್ಲಿ ಬುಧವಾರ ನಡೆದ 2ನೇ ದಿನದ ಅಧಿವೇಶನದಲ್ಲಿ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಹಲವು ನಿರ್ಣಯ ಕೈಗೊಂಡರು.

ರಾಜ್ಯದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣ ಹೆಚ್ಚುತ್ತಿರುವುದಕ್ಕೆ ಪುರುಷ ಕೇಂದ್ರೀತ, ಪುರೋಹಿತಶಾಹಿ ಮತ್ತು ಪಾಳೇಗಾರಿಕಾ ಮನೋಭಾವ ಕಾರಣ. ಮಹಿಳೆಯರ ಮೇಲಿನ ಹಿಂಸೆ ಕೊನೆಗಾಣಿಸಬೇಕು. ನವ ಉದಾರೀಕರಣದ ಫಲವಾದ ಖಾಸಗೀಕರಣ ಈ ಪ್ರತಿಗಾಮಿ ಧೋರಣೆಗಳನ್ನು ಪೋಷಿಸುತ್ತಿದೆ. ಮಹಿಳೆಯ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ಹಲ್ಲೆ, ಜೀತಗಾರಿಕೆ, ಮಹಿಳೆಯರ ಕಳ್ಳಸಾಗಣೆ, ವೇಶ್ಯಾವಾಟಿಕೆ, ಕೌಟುಂಬಿಕ ದೌರ್ಜನ್ಯ ನಡೆಯುತ್ತಿವೆ. ಈ ದೌರ್ಜನ್ಯಗಳು ಮಹಿಳೆಯರನ್ನು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಅತ್ಯಂತ ಹಿಂಸಾತ್ಮಕ ಬದುಕಿಗೆ ದೂಡಿದೆ. ಇಂತಹ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ADVERTISEMENT

ನಿರ್ಭಯಾ ಪ್ರಕರಣದ ನಂತರ ನೇಮಕಗೊಂಡ ಜೆ.ಎಸ್‌.ವರ್ಮಾ ಸಮಿತಿ ಶಿಫಾರಸುಗಳಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕಡಿಮೆ ಅವಧಿಯಲ್ಲಿ ಪ್ರಕರಣ ಮುಗಿಸಬೇಕು, ಆರೋಪಿಗಳಿಗೆ ಹೆಚ್ಚಿನ ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳನ್ನು ಗಂಭೀರ ಲೈಂಗಿಕ ಅಪರಾಧಗಳಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ವೈವಾಹಿಕ ಅತ್ಯಾಚಾರಗಳನ್ನು ಅಪರಾಧವಾಗಿ ಪರಿಗಣಿಸಬೇಕು. ಭಾರತೀಯ ದಂಡ ಸಂಹಿತೆಯ 498ಎ ಲಕಂ, ವರದಕ್ಷಿಣೆ ನಿಷೇಧ ಕಾಯ್ದೆ ಯನ್ನು ಸಂರಕ್ಷಿಸಬೇಕು. ಬೆಲೆ ಏರಿಕೆ ನಿಯಂತ್ರಿಸಿ, ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು. ಪಡಿತರ ಚೀಟಿ ಪಡೆಯಲು ಆಧಾರ್‌ ಜೋಡಣೆಯನ್ನು ಕೈ ಬಿಟ್ಟು ಪ್ರತಿ ಕುಟುಂಬಕ್ಕೆ ಪ್ರಾದೇಶಿಕ ಆಹಾರ ಪದ್ಧತಿಗನುಗುಣವಾಗಿ ಆಹಾರ ಧಾನ್ಯದ ಜೊತೆ ಬೇಳೆಕಾಳುಗಳು ಅಡುಗೆ ಎಣ್ಣೆ, ಸಕ್ಕರೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಆರೋಗ್ಯ ರಂಗವನ್ನು ಬಲಪಡಿಸಲು ಜನತೆಯ ಆರೋಗ್ಯ ಹಕ್ಕುಗಳನ್ನು ರಕ್ಷಿಸಬೇಕು. ನಗರ ನಿರುದ್ಯೋಗ ನಿವಾರಿಸಲು ಗ್ರಾಮೀಣ ಉದ್ಯೋಗ ಖಾತ್ರಿ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತರಬೇಕು. ಮಹಿಳೆಗೆ ಹುಟ್ಟಿದ ಮನೆ ಹಾಗೂ ಮದುವೆಯಾದ ಮನೆ ಎರಡರಲ್ಲೂ ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ಒದಗಿಸಬೇಕು. ಮಹಿಳೆ ಮತ್ತು ಮಕ್ಕಳ ಜೀವನಾಂಶ ಕಾಯ್ದೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದೆ.

ಅಧಿವೇಶನದಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷೆ ಯು.ವಾಸುಕಿ, ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್‌.ವಿಮಲಾ, ಕೆ.ನೀಲಾ, ಮೀನಾಕ್ಷಿ ಬಾಳಿ, ಕೆ.ಎಸ್‌.ಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಗೌರಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ, ಕಾಯದರ್ಶಿ ಸುಶೀಲಾ, ರೇಷ್ಮಾ, ದೇವಿ ಹಾಜರಿದ್ದರು.

**********

ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ

ಗರ್ಭಾವಸ್ಥೆಯಲ್ಲಿ ಶಿಶು ಲಿಂಗ ಪತ್ತೆ ನಿಷೇಧಿಸುವ ಕಾಯ್ದೆ (ಪಿಸಿ ಮತ್ತು ಪಿಎನ್‌ಡಿಟಿ) ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಭ್ರೂಣ ಲಿಂಗ ಪತ್ತೆಗೆ ಸಹಕಾರ ನೀಡುವವರ ವಿರುದ್ಧ ಕಠಿಣ ಕಾನೂಕು ಕ್ರಮ ಕೈಗೊಳ್ಳಬೇಕು. ದುಡಿಯುವ ಸ್ಥಳಗಳ್ಲಲಿ ಲೈಂಗಿಕ ಕಿರುಕುಳ ತಡೆ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಯುವಜನರ ಹಕ್ಕನ್ನು ರಕ್ಷಣೆ ಮಾಡಬೇಕು. ಖಾಪ್‌ ಪಂಚಾಯಿತಿಗಳನ್ನು ಹಾಗೂ ಮರ್ಯಾದೆ ಗೇಡು ಹತ್ಯೆಗಳನನ್ನು ತಡೆಯಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಅಧಿವೇಶನದಲ್ಲಿ ಒತ್ತಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.