ADVERTISEMENT

ಬಜೆಟ್‌ ಮಂಡನೆ ಇಲ್ಲ; ಅನುದಾನ ಬಳಕೆಯಾಗಿಲ್ಲ

ಜಿ.ಪಂ ಸಾಮಾನ್ಯ ಸಭೆ 6ನೇ ಬಾರಿ ಮುಂದೂಡಿಕೆ: ಅಧಿಕಾರಕ್ಕಾಗಿ ಅಭಿವೃದ್ಧಿ ಬಲಿ ಕೊಟ್ಟ ಸದಸ್ಯರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 2:48 IST
Last Updated 14 ಅಕ್ಟೋಬರ್ 2020, 2:48 IST
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡಾಗ ಅಧಿಕಾರಿಗಳನ್ನು ಹೊರತುಪಡಿಸಿ ಸದಸ್ಯರು ಯಾರೂ ಇರಲಿಲ್ಲ
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡಾಗ ಅಧಿಕಾರಿಗಳನ್ನು ಹೊರತುಪಡಿಸಿ ಸದಸ್ಯರು ಯಾರೂ ಇರಲಿಲ್ಲ   

ಮಂಡ್ಯ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ ಹಾಗೂ ಜೆಡಿಎಸ್‌ ಸದಸ್ಯರ ನಡುವಿನ ಅಧಿಕಾರದ ಕಿತ್ತಾಟ ಮುಂದುವರಿದಿದೆ. ಮಂಗಳವಾರ ನಡೆಯಬೇಕಾಗಿದ್ದ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿದ್ದು ಕಳೆದೊಂದು ವರ್ಷದಿಂದ 6ನೇ ಬಾರಿ ಮುಂದೂಡಲಾಗಿದೆ.

2020–21ನೇ ಸಾಲಿನ ಬಜೆಟ್‌ ಇನ್ನೂ ಮಂಡನೆಯಾಗಿಲ್ಲ. ಈಗಾಗಲೇ ಅರ್ಧ ವರ್ಷ ಮುಕ್ತಾಯವಾಗಿದ್ದು ಹಣ ಹಂಚಿಕೆಯ ಕಾರ್ಯಯೋಜನೆ ಪ್ರಕ್ರಿಯೆಗಳು ನಡೆದಿಲ್ಲ. ವಿವಿಧ ಫಲಾನುಭವಿ ಯೋಜನೆಗಳು, ವಿವಿಧ ಕಾರ್ಯಕ್ರಮಗಳಿಗೆ ಸಾಮಾನ್ಯಸಭೆಯ ಅನುಮೋದನೆ ಬಾಕಿ ಇದ್ದು ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ. ಆಡಳಿತ ಮಂಡಳಿಯ ಅವಧಿ ಕೇವಲ 6 ತಿಂಗಳು ಬಾಕಿ ಉಳಿದಿದೆ. ಇಷ್ಟಾದರೂ ಅಧ್ಯಕ್ಷೆ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಹಗ್ಗಜಗ್ಗಾಟ ಇನ್ನೂ ನಿಂತಿಲ್ಲ.

15ನೇ ಹಣಕಾಸು ಯೋಜನೆ, ಕುಡಿಯುವ ನೀರಿನ ಅನುದಾನ ಸೇರಿ ಒಟ್ಟು ₹ 40 ಕೋಟಿ ಅನುದಾನ ವಾಪಸ್‌ ಹೋಗುವ ಅಪಾಯ ಎದುರಾಗಿದೆ. ಅಧ್ಯಕ್ಷೆ ನಾಗರತ್ನಾ ಸ್ವಾಮಿ ವಿರುದ್ಧ ಅಸಹಕಾರ ಮುಂದುವರಿಸಿರುವ ಜೆಡಿಎಸ್‌ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದರೂ ಸಭಾಂಗಣಕ್ಕೆ ಗೈರು ಹಾಜರಾಗುತ್ತಿದ್ದಾರೆ. ಅಧ್ಯಕ್ಷೆ ಅಧಿಕಾರ ಬಿಡಲು ಒಪ್ಪುತ್ತಿಲ್ಲ, ಜೆಡಿಎಸ್‌ ಸದಸ್ಯರು ಅವರಿಗೆ ಸಹಕಾರ ನೀಡಲು ಸಿದ್ಧರಿಲ್ಲ.

ADVERTISEMENT

ಮಂಗಳವಾರ ಕೂಡ ಸದಸ್ಯರು ಇದೇ ನಡೆ ಮುಂದುವರಿಸಿದರು. ಬೆಳಿಗ್ಗೆ 11.15ಕ್ಕೆ ಅಧ್ಯಕ್ಷೆ ಹಾಗೂ ಸಿಇಒ ಜುಲ್ಫಿಕರ್‌ ಉಲ್ಲಾ ಸಭಾಂಗಣಕ್ಕೆ ಬಂದರು. ಕಾಂಗ್ರೆಸ್‌ ಸದಸ್ಯರು ಕೂಡಾ ಸಭೆಗೆ ಬಾರದಿರುವುದು ಅನುಮಾನಕ್ಕೆ ಕಾರಣವಾಯಿತು. ಮಧ್ಯಾಹ್ನ 12 ಗಂಟೆಯಾದರೂ ಸಭೆಗೆ ಸದಸ್ಯರು ಬಾರದ ಕಾರಣ ಕೋರಂ ಕೊರತೆಯ ಕಾರಣಕ್ಕೆ ಸಭೆಯನ್ನು ಮುಂದೂಡಲಾಯಿತು. ಕೋವಿಡ್‌ ಕಾರಣಕ್ಕೆ ಒಂದು ಬಾರಿ ಸಭೆಯನ್ನು ಮುಂದೂಡಲಾಗಿತ್ತು. ಇದನ್ನು ಹೊರತುಪಡಿಸಿದರೆ ಆಡಳಿತ ಪಕ್ಷದ ಗೊಂದಲದಿಂದಾಗಿಯೇ ಒಟ್ಟು ಐದು ಬಾರಿ ಸಭೆ ಮುಂದೂಡಲಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಅಧ್ಯಕ್ಷೆ ನಾಗರತ್ನಾ ಸ್ವಾಮಿ ‘ಬಜೆಟ್‌ ಮಂಡನೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಬಾರಿ ₹ 981 ಕೋಟಿ ಬಜೆಟ್‌ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಸದಸ್ಯರ ಅಸಹಕಾರದಿಂದಾಗಿ ಬಜೆಟ್‌ ಮಂಡಿಸಲು ಸಾಧ್ಯವಾಗಲಿಲ್ಲ. ಸದಸ್ಯರು ಸಭೆಗೆ ಗೈರುಹಾಜರಾದ ಕಾರಣ ಸಭೆಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು’ ಎಂದು ಹೇಳಿದರು.

‘ಸದಸ್ಯರ ಅಸಹಕಾರ ಧೋರಣೆಯಿಂದ ಸರ್ಕಾರದಿಂದ ಬಿಡುಗಡೆಯಾಗಿರುವ ಹಣ ಬಳಕೆ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಹಣ ವಾಪಸ್‌ ಪಡೆಯದಂತೆ ಮನವಿ ಮಾಡಲಾಗುವುದು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುದಾನ ತಡೆಹಿಡಿಯದಂತೆ ಕೋರಲಾಗುವುದು’ ಎಂದರು.

ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಮಾತನಾಡಿ ‘ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ವಿವಿಧ ಅನುದಾನಗಳಿಗೆ ಬಂದಿರುವ ಹಣ ಹಂಚಿಕೆ ವಿಷಯದಲ್ಲಿ ಅನ್ಯಾಯ ಮಾಡಿದ್ದಾರೆ. ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಸಭೆಗೆ ತೆರಳಲು ಜೆಡಿಎಸ್‌ ಸದಸ್ಯರೆಲ್ಲರೂ ಸಿದ್ಧರಾಗಿ ಬಂದಿದ್ದೆವು, ಆದರೆ ಅಧ್ಯಕ್ಷರ ಧೋರಣೆಯಿಂದಾಗಿ ನಾವು ಸಭೆಗೆ ಹೋಗಲಿಲ್ಲ’ ಎಂದರು.

ವಿರೋಧ ಪಕ್ಷದ ನಾಯಕ ರಾಜೀವ್‌ ಮಾತನಾಡಿ ‘ಜೆಡಿಎಸ್‌ ಪಕ್ಷದೊಳಗಿನ ಗೊಂದಲದಿಂದಾಗಿ ಬಜೆಟ್‌ ಮಂಡನೆಯಾಗಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಹಣ ಹಂಚಿಕೆಯಾಗಿಲ್ಲ. ಕೋವಿಡ್‌ ಸೇರಿದಂತೆ ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.