ADVERTISEMENT

ಯಾರೇ ಅಡ್ಡಿಪಡಿಸಿದರೂ ‘ಕಾವೇರಿ ಆರತಿ’ ನಿಲ್ಲುವುದಿಲ್ಲ: ಶಾಸಕ ರವಿಕುಮಾರ್‌ ಗಣಿಗ

​ಪ್ರಜಾವಾಣಿ ವಾರ್ತೆ
Published 19 ಮೇ 2025, 12:29 IST
Last Updated 19 ಮೇ 2025, 12:29 IST
<div class="paragraphs"><p>ಶಾಸಕ ಪಿ.ರವಿಕುಮಾರ್‌ ಗಣಿಗ</p></div>

ಶಾಸಕ ಪಿ.ರವಿಕುಮಾರ್‌ ಗಣಿಗ

   

ಮಂಡ್ಯ: ‘ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಹೋದರೂ ಈ ರೀತಿ ತಡೀತಾರೆ. ಹೀಗಾಗಿ ಮಂಡ್ಯ ನಗರ ಇನ್ನೂ ಹಳ್ಳಿಯ ರೀತಿಯೇ ಇದೆ. ‘ಕಾವೇರಿ ಆರತಿ’ ಹಿಂದೂಗಳ ಭಾವನಾತ್ಮಕ ಧಾರ್ಮಿಕ ಕಾರ್ಯಕ್ರಮ. ಇದರಿಂದ ರೈತ ಸಂಘಕ್ಕೆ ತೊಂದರೆ ಏನು? ವಿರೋಧ ಮಾಡ್ತೀವಿ ಅಂತ ಎಲ್ಲವನ್ನೂ ವಿರೋಧ ಮಾಡುವುದಲ್ಲ’ ಎಂದು ಶಾಸಕ ಪಿ.ರವಿಕುಮಾರ್‌ ಗಣಿಗ ಅವರು ರೈತಸಂಘದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕೂಡ ಅರ್ಥ ಮಾಡಿಕೊಳ್ಳಬೇಕು. ಯಾರೇ ವಿರೋಧ ಮಾಡಿದ್ರು ಕಾವೇರಿ ಆರತಿ ಮಾಡೇ ಮಾಡ್ತೀವಿ. ಯಾರೇ ಅಡ್ಡ ಬಂದ್ರು ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಪುಣ್ಯಾತ್ಮ ಡಿ.ಕೆ.ಶಿವಕುಮಾರ್‌ ಮಂಡ್ಯ ಅಭಿವೃದ್ಧಿ ಮಾಡ್ತೀನಿ ಅಂತ ಬಂದಿದ್ದಾರೆ. ಮುಂಬರುವ ದಸರಾ ವೇಳೆಗೆ ಕಾವೇರಿ ಆರತಿ ಮಾಡ್ತೀವಿ ಎಂದು ಖಡಕ್ಕಾಗಿ ನುಡಿದರು. 

ADVERTISEMENT

ಕೆಆರ್‌ಎಸ್ ಡ್ಯಾಂ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ರೈತರ ವಿರೋಧಕ್ಕೆ ಪ್ರತಿಕ್ರಿಯಿಸಿ, ‘ರೈತರಿಂದ ಉಚಿತವಾಗಿ ನಾವು ಜಮೀನು ಸ್ವಾಧೀನ ಮಾಡುವುದಿಲ್ಲ. ಅದಕ್ಕೆ ಸಮರ್ಪಕ ಪರಿಹಾರ ನೀಡುತ್ತೇವೆ’ ಎಂದು ಹೇಳಿದರು. 

ಬೆಂಗಳೂರಿನಲ್ಲಿ ಮಳೆಯಿಂದಾದ ಅವ್ಯವಸ್ಥೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಒಂದೇ ದಿನದಲ್ಲಿ ಬ್ರ್ಯಾಂಡ್‌ ಬೆಂಗಳೂರು ಮಾಡೋಕೆ ಸಾಧ್ಯವಿಲ್ಲ. ₹20 ಸಾವಿರ ಕೋಟಿಯಲ್ಲಿ ಟನಲ್‌ ಮಾಡ್ತಿದ್ದೀವಿ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವಾಗುತ್ತಿದೆ. ಜನತಾದಳ ಮತ್ತು ಬಿಜೆಪಿ ಇದ್ದಾಗ ಏಕೆ ಕೆಲಸ ಮಾಡಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಬ್ರ್ಯಾಂಡ್‌ ಬೆಂಗಳೂರು ಏನು ಅನ್ನೋದು ಕಾಣಿಸುತ್ತದೆ’ ಎಂದು ಹೇಳಿದರು. 

‘ಪೊಲೀಸರ ಬೆಂಬಲದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌’

ಮಂಡ್ಯ ಜಿಲ್ಲೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌, ರೌಡಿಸಂ, ವೇಶ್ಯಾವಾಟಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಇವೆಲ್ಲವೂ ಪೊಲೀಸರ ಬೆಂಬಲದಲ್ಲೇ ನಡೀತಾ ಇವೆ. ಕೆಲವು ಪೊಲೀಸ್‌ ಸಿಬ್ಬಂದಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್‌ ಗಣಿಗ ಗಂಭೀರ ಆರೋಪ ಮಾಡಿದರು. 

ನಗರದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ‘ನಾನು ಚಾಪೆ ಕೆಳಗೆ ನುಗ್ಗಿದರೆ, ಪೊಲೀಸ್‌ನವರು ರಂಗೋಲಿ ಕೆಳಗೆ ನುಗ್ಗುತ್ತಿದ್ದಾರೆ. ಅಪರಾಧ ಕೃತ್ಯಕ್ಕೆ ಬೆಂಬಲ ನೀಡುತ್ತಿರುವ ಪೊಲೀಸ್‌ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಹೈಟೆಕ್‌ ಸ್ಪಾಗಳಲ್ಲಿ ನಡೆಯುವ ದಂಧೆಗಳಿಗೆ ಕಡಿವಾಣ ಹಾಕಿ’ ಎಂದು ಸಭೆಯಲ್ಲಿದ್ದ ಡಿವೈಎಸ್ಪಿ ಅವರಿಗೆ ಖಡಕ್‌ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.