ADVERTISEMENT

ಚುನಾವಣೆ ಎದುರಿಸಲು ಹಣದ ಶಕ್ತಿ ಇಲ್ಲ: ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 13:48 IST
Last Updated 5 ಡಿಸೆಂಬರ್ 2021, 13:48 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಮಂಡ್ಯ: ‘ಸ್ಥಳೀಯ ಸಂಸ್ಥೆಗಳ ಎಲ್ಲಾ ವಿಧಾನ ಪರಿಷತ್‌ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಮ್ಮಲ್ಲಿ ಹಣದ ಶಕ್ತಿ ಇಲ್ಲ. ಹೀಗಾಗಿ ಗೆಲ್ಲುವ ಕ್ಷೇತ್ರಗಳಲ್ಲಿ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭಾನುವಾರ ಹೇಳಿದರು.

‘ನಮ್ಮ ಪಕ್ಷ ಕೇವಲ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಸದೃಢವಾಗಿದೆ. ಒಮ್ಮೆ ಆ ಭಾಗದಲ್ಲಿ ನಾವು 40 ಸೀಟುಗಳನ್ನು ಗೆದ್ದಿದ್ದೇವೆ. ಆದರೆ ಆ ಭಾಗದಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಣದ ಬಲ ಇಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಲಬುರಗಿಯಲ್ಲಿ ನಮ್ಮ ಪಕ್ಷ ಬೆಂಬಲಿಸುವ 1 ಸಾವಿರ ಮತದಾರರಿದ್ದಾರೆ, ರಾಯಚೂರು, ವಿಜಯಪುರದಲ್ಲಿ 900, ಯಾದಗಿರಿಯಲ್ಲಿ 500 ಮತದಾರರಿದ್ದಾರೆ. ಆ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲಿಸುವ ಕುರಿತು ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ನಿರ್ಧಾರ ಪ್ರಕಟಿಸುತ್ತಾರೆ’ ಎಂದರು.

ADVERTISEMENT

‘ನಾನು ಮುಖ್ಯಮಂತ್ರಿಯಾಗಿದ್ದಾಗ ಕಲ್ಪಿಸಿದ ಮೀಸಲಾತಿಯಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಬುಡುಬುಡುಕೆ ಸಮುದಾಯದವರೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೇರಿದರು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 16 ಸ್ಥಾನಗಳಲ್ಲಿ ಜಯಗಳಿಸಿತು. ನಂತರ ನಮ್ಮ ಪಕ್ಷದವರೇ (ಜೆ.ಎಚ್‌.ಪಟೇಲ್‌, ಸಿದ್ದರಾಮಯ್ಯ) ಮೂರೂವರೆ ವರ್ಷ ಅಧಿಕಾರ ನಡೆಸಿದರು. ಆಗ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆಲ್ಲಲಷ್ಟೇ ಸಾಧ್ಯವಾಯಿತು, ಇದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

‘2023ಕ್ಕೆ ನಾವು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್‌ 150 ಸ್ಥಾನ ಗೆದ್ದರೆ ನಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ. ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವನ್ನು ದರಿದ್ರ ಸರ್ಕಾರ ಎಂದಿದ್ದವರು ನಮ್ಮ ಮನೆಯ ಬಾಗಿಲಿಗೆ ಬಂದು ನಿಂತಿದ್ದರು’ ಎಂದರು.

‘ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಕ್ಕೆ ಬೇರೆ ಅರ್ಥ ಕಲ್ಪಿಸುತ್ತಿದ್ದಾರೆ. ಮೋದಿ ಅವರ ಮೇಲೆ ನನಗೆ ವಿಶೇಷ ಗೌರವ ಇದೆ. ಗೋದ್ರಾ ಘಟನೆ ನಡೆದಾಗ ಇದ್ದ ಮೋದಿಗೂ ಈಗಿನ ಮೋದಿಗೂ ವ್ಯತ್ಯಾಸವಿದೆ. ಅವರು ಪ್ರಧಾನಿ ಆಗುವುದಕ್ಕೂ ಮೊದಲು, ಬಿಜೆಪಿ 273 ಸೀಟು ಗೆದ್ದರೆ ನಾನು ರಾಜೀನಾಮೆ ಕೊಡತ್ತೇನೆ ಎಂದು ಹೇಳಿದ್ದೆ. ಬಿಜೆಪಿ ಬಹುಮತ ಗಳಿಸಿತು, ರಾಜೀನಾಮೆ ಸಲ್ಲಿಸಲು ಅವರನ್ನು ಭೇಟಿಯಾಗಿದ್ದೆ. ಆದರೆ ಅವರು ನನ್ನ ರಾಜೀನಾಮೆ ಸ್ವೀಕರಿಸಲಿಲ್ಲ, ಸತ್ಕರಿಸಿ ಕಳುಹಿಸಿದರು. ಹೀಗಾಗಿ ಅವರ ಮೇಲೆ ವಿಶೇಷ ಗೌರವ ಇದೆ’ ಎಂದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ‘ತಾ.ಪಂ, ಜಿ.ಪಂ ಚುನಾವಣೆಯ ನಂತರ ವಿಧಾನ ಪರಿಷತ್‌ ಚುನಾವಣೆ ನಡೆಸಬಹುದಾಗಿತ್ತು. ಈಗ ಚುನಾವಣೆ ನಡೆಸುವ ಮೂಲಕ ಜಿ.ಪಂ, ತಾ.ಪಂ ಸದಸ್ಯರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.