ಹಲಗೂರು: ‘ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ನರೇಗಾ ಯೋಜನೆಗಳಿಗೆ ₹1.12 ಲಕ್ಷ ಕೋಟಿ ಅನುದಾನ ಮಂಜೂರಾಗಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ₹ 86 ಸಾವಿರ ಕೋಟಿಗೆ ಅನುದಾನ ಇಳಿಸುವ ಮೂಲಕ ಬಡ ಕೂಲಿಕಾರರ ಹೊಟ್ಟೆಯ ಮೇಲೆ ಹೊಡೆದಿದೆ’ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ದೂರಿದರು.
ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮಂಗಳವಾರ ಆಯೋಜಿಸಿದ್ದ ಹೋಬಳಿ ಮಟ್ಟದ 5ನೇ ಹುಸ್ಕೂರು ವಲಯ ಸಮ್ಮೇಳನದಲ್ಲಿ ಮಾತನಾಡಿದರು.
‘ಪ್ರಸ್ತುತ ನರೇಗಾ ಕೂಲಿಕಾರರ ಹಿತದೃಷ್ಟಿಯಿಂದ ₹ 2.35 ಲಕ್ಷ ಕೋಟಿ ಅನುದಾನ ಅಗತ್ಯವಿತ್ತು. ಆದರೆ ಸರ್ಕಾರ ಅನುದಾನ ಇಳಿಸಿರುವುದು ಖಂಡನೀಯ. ಕೇಂದ್ರ ಸರ್ಕಾರ ₹1.77 ಲಕ್ಷ ಕೋಟಿ ಸಾಲ ಮಾಡಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೆ ₹1.27 ಲಕ್ಷ ಸಾಲದ ಹೊರೆ ಹೊರಿಸಲಾಗಿದೆ’ ಎಂದು ಆರೋಪಿಸಿದರು.
ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಂಬಲ ಬೆಲೆ ಸಿಗದೇ ಪರಿತಪಿಸುತ್ತಿದ್ದಾರೆ. ಆಳುವ ಸರ್ಕಾರಗಳು ಶ್ರೀಮಂತರು ಪರವಾಗಿ ಯೋಜನೆಗಳನ್ನು ರೂಪಿಸುತ್ತಿದ್ದು, ಬಡ ಜನರು ಕಂಗಾಲಾಗಿದ್ದಾರೆ ಎಂದರು.
ಜಿಲ್ಲಾ ಸಹ ಕಾರ್ಯದರ್ಶಿ ಸರೋಜಮ್ಮ, ‘ನರೇಗಾ ಯೋಜನೆಯಡಿ ವರ್ಷಕ್ಕೆ ಪ್ರತಿ ಕುಟುಂಬಕ್ಕೆ ಕನಿಷ್ಠ 200 ದಿನ ಕೆಲಸ ಮತ್ತು ದಿನಕ್ಕೆ ₹ 600 ಕೂಲಿ ನೀಡಬೇಕು ಎಂದು ಎರಡು ವರ್ಷಗಳಿಂದಲೂ ಒತ್ತಾಯಿಸುತ್ತಾ ಬಂದಿದ್ದು, ಕೂಲಿಕಾರರು ಒಂದಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು‘ ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಹುಸ್ಕೂರು ವಲಯ ಅಧ್ಯಕ್ಷ ಯಾಲಕ್ಕಯ್ಯ, ಜಿಲ್ಲಾ ಸಹ ಕಾರ್ಯದರ್ಶಿ ಸರೋಜಮ್ಮ, ಮುಖಂಡರಾದ ಶುಭವತಿ, ಲಕ್ಷ್ಮಮ್ಮ, ಕಪನೀಗೌಡ, ಮಣಿಯಮ್ಮ, ಸವಿತಾ, ರಾಮಣ್ಣ, ಸಾಹುಕಯ್ಯ, ಪುಟ್ಟಮ್ಮ, ಪ್ರಮೀಳಾ, ಅರುಣ್ ಕುಮಾರ್, ಪಾಪಣ್ಣ, ಜ್ಯೋತಿ, ಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.