ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ 120ಕ್ಕೇರಿದೆ. ಇದಕ್ಕೆ ಕಾರಣವಾಗಿದೆ ಎನ್ನಲಾದ, ಮಳವಳ್ಳಿ ಪಟ್ಟಣದ ಹೊರವಲಯದಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ಹೋಟೆಲ್ ಬಂದ್ ಮಾಡಿಸಲಾಗಿದೆ.
ಊಟ ಸೇವಿಸಿದ್ದ 40 ಮಕ್ಕಳು, ಊಟ ಕಳುಹಿಸಿದ್ದ ಉದ್ಯಮಿಯ 61 ಸಂಬಂಧಿಕರು ಹಾಗೂ ಹೋಟೆಲ್‌ನಲ್ಲಿ ಊಟ ಖರೀದಿಸಿದ್ದ 20ಕ್ಕೂ ಅಧಿಕ ಕೃಷಿ ಕೂಲಿಕಾರ್ಮಿಕರಿಗೆ ವಾಂತಿ–ಭೇದಿಯಾಗಿ ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದ ಸೋಮವಾರ ಹೋಟೆಲ್ ಮುಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮೇಘಾಲಯದ ವಿದ್ಯಾರ್ಥಿ ಕಿರ್ಶನ್ ಲ್ಯಾಂಗ್ (13) ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಒಟ್ಟು ನಾಲ್ವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಜನರಲ್ ವಾರ್ಡ್‌ನಲ್ಲಿದ್ದಾರೆ.
ಉದ್ಯಮಿ ಪುಷ್ಪೇಂದ್ರಕುಮಾರ್ ಅವರು ಶುಕ್ರವಾರ ಹೋಳಿ ಆಚರಣೆಗಾಗಿ 150 ಮಂದಿಗೆ ಊಟ ತಯಾರಿಸಲು ಹೇಳಿದ್ದರು. ಊಟ ಸೇವಿಸಿದ್ದ ಉದ್ಯಮಿಯ ಸಂಬಂಧಿಕರಲ್ಲಿ 61 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಮತ್ತೊಂದೆಡೆ, ಆ ದಿನ ಉದ್ಯಮಿಗೆ ಆಹಾರ ನೀಡಿ, ಉಳಿದದ್ದನ್ನು ಹೋಟೆಲ್‌ನಲ್ಲಿ ಮಾರಲಾಗಿತ್ತು. ಆ ಊಟ ಮಾಡಿದ 20ಕ್ಕೂ ಅಧಿಕ ಮಂದಿ ಸಹ ಅಸ್ವಸ್ಥಗೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ಗದ್ದೆಗಳ ಬಳಿಗೆ ತೆರಳಿ ಅಲ್ಲಿ ಬಿಸಾಡಿದ್ದ ಸ್ಪಲ್ಪ ಪ್ರಮಾಣದ ಊಟವನ್ನು ಸಂಗ್ರಹಿಸಿ, ಪ್ರಯೋಗಾಲಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಕೂಲಿಕಾರ್ಮಿಕರಿಂದ ಮಾಹಿತಿ ಪಡೆದಿದ್ದಾರೆ.
ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಭಾನುವಾರ ಬಂಧಿತರಾಗಿದ್ದ ಹೋಟೆಲ್ ಮಾಲೀಕ ಸಿದ್ದರಾಜು, ಲಂಕೇಶ್, ಅಭಿಷೇಕ್ ಅವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.