ADVERTISEMENT

6 ತಿಂಗಳಲ್ಲಿ ಸಾವಿರ ನೀವೇಶನ ಹಂಚಿಕೆ

ಅಧಿಕಾರಿಗಳ ಸಭೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:02 IST
Last Updated 21 ಡಿಸೆಂಬರ್ 2025, 5:02 IST
ಶ್ರೀರಂಗಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು
ಶ್ರೀರಂಗಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು   

ಶ್ರೀರಂಗಪಟ್ಟಣ: ‘ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಗೋಮಾಳ ಹಾಗೂ ಬಳಕೆಗೆ ಲಭ್ಯವಿರುವ ಸರ್ಕಾರಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಒಂದು ಸಾವಿರ ಮಂದಿ ವಸತಿ ರಹಿತರಿಗೆ ಉಚಿತವಾಗಿ ನಿವೇಶನ ಹಂಚಲಾಗುವುದು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕಂದಾಯ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಸರ್ಕಾರಿ ಜಾಗವನ್ನು ಗುರುತಿಸಿ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರಿಗೆ ದಾಖಲೆಗಳನ್ನು ಸಲ್ಲಿಸಬೇಕು. ಸದರಿ ಜಮೀನನ್ನು ಜಿಲ್ಲಾಧಿಕಾರಿ ಅವರ ಮೂಲಕ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಬೇಕು. ಜ.15ರೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಆಯಾ ಗ್ರಾಮಗಳಲ್ಲಿ ಲಭ್ಯ ಇರುವ ಸರ್ಕಾರಿ ಜಾಗದ ಆಧಾರದ ಮೇಲೆ ನಿವೇಶನ ರಹಿತರಿಗೆ 30–40 ಅಡಿ ಅಳತೆಯ ನಿವೇಶನ ಹಂಚಲಾಗುತ್ತದೆ. ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದು, ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಮೇ ತಿಂಗಳನಿಂದ ನಿವೇಶನದ ಹಕ್ಕು ಪತ್ರ ವಿತರಣೆ ಕಾರ್ಯ ಆರಂಭಿಸಿ ಜೂ.30ರೊಳಗೆ ಮುಗಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕಿನ ಚನ್ನಹಳ್ಳಿ ಬೋರೆ ಇತರೆಡೆ ಸರ್ಕಾರಿ ಭೂಮಿ ಅತಿಕ್ರಮ ನಡೆದಿದೆ ಎಂಬ ದೂರುಗಳಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಅತಿಕ್ರಮ ತೆರವು ಮಾಡಿಸಬೇಕು’ ಎಂದರು.

‘ಮೊಳ್ಳೇನಹಳ್ಳಿಕೊಪ್ಪಲು, ಹುಂಜನಕೆರೆ, ಕೊಕ್ಕರೆಹುಂಡಿ ಇತರ ಕಡೆ ಮತಗಟ್ಟೆ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಬೇಕು’ ಎಂದು ಚನಾವಣಾ ಶಾಖೆ ಶಿರಸ್ತೇದಾರ್‌ ನೇತ್ರಾವತಿ ಅವರಿಗೆ ಹೇಳಿದರು.

ತಾಲ್ಲೂಕು ಆಡಳಿತಾಧಿಕಾರಿ ಲಕ್ಷ್ಮಿ, ತಹಶೀಲ್ದಾರ್‌ ಚೇತನಾ ಯಾದವ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ.ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.