ADVERTISEMENT

ಮಳವಳ್ಳಿ: ದಲಿತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು

ಎಸ್‌ಸಿ, ಎಸ್‌ಟಿ ಕುಂದು–ಕೊರತೆ ಸಭೆಯಲ್ಲಿ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:55 IST
Last Updated 23 ಜುಲೈ 2025, 2:55 IST
ಮಳವಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿದರು
ಮಳವಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿದರು   

ಮಳವಳ್ಳಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು–ಕೊರತೆ ಸಭೆಗೆ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆಯಡಿ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಹಶೀಲ್ದಾರ್ ಎಸ್.ವಿ.ಲೋಕೇಶ್ ಎಚ್ಚರಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ನಾವೆಲ್ಲರೂ ಕರ್ತವ್ಯ ನಿರ್ವಹಿಸಬೇಕಿದ್ದು, ಜನರಿಗೆ ಮೂಲಸೌಕರ್ಯ ಒದಗಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕು. ಕಳೆದ ಬಾರಿ ನಡೆದ ಸಭೆಯಲ್ಲಿ ಚರ್ಚೆಯಾದ ಕೆಲ ಸಮಸ್ಯೆಗಳನ್ನು ಆಯಾಯ ಇಲಾಖೆಯ ಅಧಿಕಾರಿಗಳು ಬಗೆಹರಿಸಿದ್ದಾರೆ. ಇನ್ನೂ ಹಲವು ವಿಷಯಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಸಭೆಯಲ್ಲಿ ಮಂಡಿಸಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನಲ್ಲಿ ‘ದಲಿತರ ನಿವೇಶನ, ಕೃಷಿ ಭೂಮಿ, ಸ್ಮಶಾನ, ರಸ್ತೆಗಳ, ಓಣಿ ಒತ್ತುವರಿ ಮಾಡಿಕೊಂಡು ತೊಂದರೆ ನೀಡುವ ಪ್ರಕರಣಗಳು ಸಾಕಷ್ಟಿದ್ದು, ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೇ ಕೆಲವು ಸಂದರ್ಭದಲ್ಲಿ ದೌರ್ಜನ್ಯ ಸಹ ಅಲ್ಲಲ್ಲಿ ಕಂಡು ಬರುತ್ತಿವೆ. ಹೀಗಾಗಿ ತಾಲ್ಲೂಕು ಆಡಳಿತ ತ್ವರಿತ ರೀತಿಯಲ್ಲಿ ಕ್ರಮ ವಹಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು.

ತಾಲ್ಲೂಕಿನ ಹಿಟ್ಟಿನಹಳ್ಳಿಕೊಪ್ಪಲು ಗ್ರಾಮದಲ್ಲಿ ದಲಿತರ ಬಡಾವಣೆಗೆ ಹೋಗುವ ಮುಖ್ಯರಸ್ತೆಯಲ್ಲಿ ಎಮ್ಮೆ ದನಗಳನ್ನು ಕಟ್ಟಿ ಇಡೀ ರಸ್ತೆ ಗಬ್ಬೆದ್ದು ನಾರುವಂತೆ ಮಾಡುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಪಿಡಿಒ ವಿಜಯ್ ಕುಮಾರ್ ಪ್ರತಿಕ್ರಿಯಿಸಿ, ‘ಆ ಸ್ಥಳಕ್ಕೆ ಹೋದಾಗ ನನ್ನ ಮೇಲೆಯೇ ಹಲ್ಲೆ ಯತ್ನ ನಡೆಯಿತು’ ಎಂದರು. ‌

ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಮಾತನಾಡಿ, ‘ಘಟನೆ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಪಂಚಾಯಿತಿಯಿಂದ ತೆರವು ಕಾರ್ಯಾಚರಣೆ ಮಾಡಿದರೆ ಸೂಕ್ತ ಭದ್ರತೆ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಪಿ.ವೀರಭದ್ರಪ್ಪ, ಸಿಪಿಐಗಳಾದ ಬಿ.ಎಸ್.ಶ್ರೀಧರ್, ಬಿ.ಜಿ.ಮಹೇಶ್, ಎಂ.ರವಿಕುಮಾರ್ ಪಾಲ್ಗೊಂಡಿದ್ದರು.

ನಾಮಫಲಕ ವಿವಾದ

‘ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಮೂತ್ರ ವಿಸರ್ಜನೆ ಮಾಡುವ ಸ್ಥಳದಲ್ಲಿ ಬಿ.ಆರ್.ಅಂಬೇಡ್ಕರ್ ರಸ್ತೆ ನಾಮಫಲಕ ಹಾಕಿ ಪುರಸಭೆ ಅಧಿಕಾರಿಗಳು ಸಂವಿಧಾನ ಶಿಲ್ಪಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜು ಆರೋಪಿಸಿದರು. ಪುರಸಭೆ ಮಾಜಿ ಸದಸ್ಯ ಕಿರಣ್ ಶಂಕರ್ ಮಾತನಾಡಿ ‘ಪುರಸಭೆಯಿಂದ ನಿಯಮಾವಳಿಯಂತೆ ನಾಮಫಲಕ ಹಾಕಬೇಕಿತ್ತು. ಆದರೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸದೇ ಹಿಂದೆ ಕಾಟಾಚಾರಕ್ಕೆ ಅಳವಡಿಕೆ ಮಾಡಲಾಗಿದೆ’ ಎಂದರು.

ನಿವೇಶನರಹಿತರಿಗೆ ಹಕ್ಕುಪತ್ರ ನೀಡಲು ಆಗ್ರಹ

‘ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷ್ಣೇಗೌಡನದೊಡ್ಡಿ ಗ್ರಾಮ ವ್ಯಾಪ್ತಿಯ ಕೆರೆಯಲ್ಲಿ ಸೋಲಿಗರು ಹಾಗೂ ಹಲಗೂರು ಕೆರೆಯಲ್ಲಿ 30 ಪೌರಕಾರ್ಮಿಕ ಕುಟುಂಬಗಳು ಜೋಪಡಿ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲ ಆರಂಭವಾದರೇ ಕೆರೆಯಲ್ಲಿ ನೀರು ತುಂಬಿಕೊಂಡು ಪಡಿಪಾಟಲು ಅನುಭವಿಸುವಂತಾಗಿದೆ. ಈ ಬಗ್ಗೆ ನಂಜಾಪುರ ಹಾಗೂ ಒದು ಬಸಪ್ಪನದೊಡ್ಡಿ ಬಳಿ ಸರ್ಕಾರಿ ಜಾಗ ಗುರುತಿಸಿದರೂ ಕಾರ್ಯಚಟುವಟಿಕೆ ಆರಂಭವಾಗಿಲ್ಲ. ತಾಲ್ಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿ ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರ ನೀಡಬೇಕು’ ಎಂದು ಮುಖಂಡ ಚೇತನ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.