ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಗಗನಚುಂಬಿ, ಮಲ್ಟಿಸ್ಪೆಷಾಲಿಟಿ ಕಟ್ಟಡಗಳು ಹೆಚ್ಚಾಗುತ್ತಿರುದ್ದು, ದೇವಾಲಯಗಳ ಗೋಪುರಗಳು, ಕರಿಘಟ್ಟ, ಕಾವೇರಿ ನದಿ ಕಾಣಿಸುತ್ತಿಲ್ಲ.ಐತಿಹಾಸಿಕ ಪಟ್ಟಣ ಮರೆಯಾಗುತ್ತಿದೆ ಎಂದು ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಗಣಂಗೂರು ನಂಜೇಗೌಡ ಅವರ ‘ರಣಧೀರ ಕಂಠೀರವ’ ಕೃತಿ ಲೋಕಾರ್ಪಣೆಯಲ್ಲಿ ಅವರು ಕೃತಿ ಕುರಿತು ಮಾತನಾಡಿದರು.
ಐತಿಹಾಸಿಕ ಪಟ್ಟಣಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು. ದೇವಾಲಯಗಳಲ್ಲಿ ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿಯಿದ್ದು ಅವುಗಳ ಸಂರಕ್ಷಣೆ ನಮ್ಮೆಲರ ಜವಾಬ್ದಾರಿಯಾಗಬೇಕು. ಸರ್ಕಾರಕ್ಕೆ ಆದಾಯ ಬರುವ ನಿಟ್ಟಿನಲ್ಲಿ ಶ್ರೀರಂಗಪಟ್ಟಣವನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಮೈಸೂರು ಅರಸರಲ್ಲಿ ಪ್ರಜೆಗಳ ಕಷ್ಟ ಅರಿತ 20 ರಾಜರು ಪ್ರಮುಖರಾಗಿದ್ದರು. ರಾಜ ಒಡೆಯರ್, ರಣಧೀರ ಕಂಠೀರವ, ದೇವರಾಜ ಒಡೆಯರ್, ಚಿಕ್ಕರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್ ಇವರ ಆಡಳಿತದ ನಂತರ ದಳವಾಯಿಗಳ ಪ್ರಾಬಲ್ಯ ಜಾಸ್ತಿಯಾಗಿ ಹೈದರ, ಟಿಪ್ಪು ಆಡಳಿತ ಪ್ರಾರಂಭವಾಯಿತು. ಕಡೆಯದಾಗಿ ಬಲಿಷ್ಠ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಕಾಣಸಿಗುತ್ತಾರೆ ಎಂದರು. ಮೈಸೂರು ಅರಸರು ನೀರಾವರಿಗೂ ಕೊಡುಗೆ ನೀಡಿದ್ದಾರೆ. ಬಂಗಾರಿ, ವಿರಿಜಾ, ಚಿಕ್ಕದೇವರಾಯ ಎಂದು ನಾಲೆಗಳಿಗೆ ಹೆಸರುಗಳನ್ನಿಟ್ಟಿದ್ದರು. ನಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳ ವೈಫಲ್ಯ ಹೆಚ್ಚಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ‘ಹುರಿಗೌಡ, ನಂಜೇಗೌಡ ಎಂಬುವವರು ಟಿಪ್ಪು ಸುಲ್ತಾನ್ ಅವರನ್ನು ಸಾಯಿಸಿದರು’ ಎಂದು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಸುಳ್ಳು ಚೆರಿತ್ರೆಗಳನ್ನು ಓದುವ ಕರ್ಮ ನಮ್ಮದಾಗಿದೆ. ‘ವಚನ ದರ್ಶನ’ ಪುಸ್ತಕ ಪ್ರಕಟಿಸಿ ಬಸವಣ್ಣನ ಆಲೋಚನಾ ಕ್ರಮವನ್ನೇ ಒಡೆದು ಬಿಸಾಕಿದ್ದಾರೆ’ ಎಂದರು.
ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಚಿಂತಕ ತುಕಾರಾಂ, ಅಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಗಣಗಂಗೂರು ನಂಜೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.