ADVERTISEMENT

ಪಾಂಡವಪುರ ಪುರಸಭೆ: ₹22.90 ಲಕ್ಷ ಉಳಿತಾಯ ಬಜೆಟ್

ಪಾಂಡವಪುರ ಪುರಸಭೆ ಆಸ್ತಿ ಅಕ್ರಮ ಪರಭಾರೆ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 13:50 IST
Last Updated 4 ಮಾರ್ಚ್ 2025, 13:50 IST
ಪಾಂಡವಪುರ ಪುರಸಭೆಯಲ್ಲಿ 2025–26ನೇ ಸಾಲಿನ ಬಜೆಟ್‌ ಮಂಡನೆ ಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಬಾಬು ಮಾತನಾಡಿದರು. ಉಪಾಧ್ಯಕ್ಷ ಎಲ್.ಅಶೋಕ, ಮುಖ್ಯಾಧಿಕಾರಿ ಸತೀಶ್‌ ಕುಮಾರ್ ಪಾಲ್ಗೊಂಡಿದ್ದರು
ಪಾಂಡವಪುರ ಪುರಸಭೆಯಲ್ಲಿ 2025–26ನೇ ಸಾಲಿನ ಬಜೆಟ್‌ ಮಂಡನೆ ಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಬಾಬು ಮಾತನಾಡಿದರು. ಉಪಾಧ್ಯಕ್ಷ ಎಲ್.ಅಶೋಕ, ಮುಖ್ಯಾಧಿಕಾರಿ ಸತೀಶ್‌ ಕುಮಾರ್ ಪಾಲ್ಗೊಂಡಿದ್ದರು   

ಪಾಂಡವಪುರ: ಇಲ್ಲಿನ ಪುರಸಭೆಯಲ್ಲಿ 2025–26ನೇ ಸಾಲಿಗೆ ₹22.90 ಲಕ್ಷದ ಉಳಿತಾಯ ಬಜೆಟ್‌ ಮಂಡಿಸಲಾಯಿತು.

ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಮಂಡನೆ ಸಭೆಯಲ್ಲಿ ಮುಖ್ಯಾಧಿಕಾರಿ ಸತೀಶ್ ಕುಮಾರ್ ಬಜೆಟ್‌ ಅನ್ನು ಓದಿದರು.

ಪುರಸಭೆ ನಾಮನಿರ್ದೇಶನ ಸದಸ್ಯ ಎಚ್.ಎಲ್. ಮುರುಳೀಧರ್ ಮಾತನಾಡಿ, ‘ಆದಾಯ ಸೋರಿಕೆ ತಡೆಗಟ್ಟಲು ಅಧಿಕಾರಿಗಳು ಕ್ರಮವಹಿಸಿದರೆ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಪಡೆಯಬಹುದು. ವಾಣಿಜ್ಯ ಮಳಿಗೆ ಮತ್ತು ಇತರೆ ಕಟ್ಟಡಗಳ ಬಾಡಿಗೆಯಿಂದ ₹9 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಪುರಸಭೆಗೆ ಸೇರಿದ 82 ಮಳಿಗೆಗಳಿದ್ದು, ಈ ಮಳಿಗೆಗಳನ್ನು ಬಾಡಿಗೆ ಪಡೆದ ವ್ಯಕ್ತಿಗಳು ತಾವೇ ಅದರ ಮಾಲೀಕರಂತೆ ವರ್ತಿಸುತ್ತಿದ್ದಾರೆ. ಮಳಿಗೆಗಳನ್ನು ವಿಭಾಗಗೊಳಿಸಿ ಸಾವಿರಗಟ್ಟಲೇ ಬಾಡಿಗೆಗೆ ನೀಡಿ ಪುರಸಭೆಗೆ ನೂರರ ಲೆಕ್ಕದಲ್ಲಿ ಬಾಡಿಗೆ ಕೊಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಅಧಿಕಾರಿಗಳು ಇದನ್ನು ತಡೆಯಲು ವಿಫಲರಾಗಿದ್ದು, ಈ ಬಜೆಟ್‌ ವಾಸ್ತವಕ್ಕೆ ತದ್ವಿರುದ್ದವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಆದರೆ ಅಭಿವೃದ್ದಿ ಶುಲ್ಕ ಮಾತ್ರ ನಿರೀಕ್ಷೆಯಂತೆ ಇಲ್ಲ’ ಎಂದು ಆರೋಪಿಸಿದರು.

ಸದಸ್ಯ ಪಾರ್ಥಸಾರಥಿ ಮಾತನಾಡಿ, ‘ಪುರಸಭೆ ಮಳಿಗೆಗಳನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಲಕ್ಷಾಂತರ ರೂಪಾಯಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಲಾಗುತ್ತಿದೆ. ಮಳಿಗೆಗಳಿಗೆ ಕ್ರಮ ಸಂಖ್ಯೆ ನೀಡಬೇಕು. ಪುರಸಭೆ ಆಸ್ತಿಗಳಲ್ಲಿ ಪ್ರಭಾವಿ ವ್ಯಕ್ತಿಗಳು ಐದು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಅದಕ್ಕೆ ತಕ್ಕಂತೆ ಕಂದಾಯ ಪಾವತಿಸುತ್ತಿಲ್ಲ. ಆದರೆ ಬಡವರ ಬಳಿ ಒಂದು ರೂಪಾಯಿಯನ್ನು ಬಿಡದೆ ಕಂದಾಯ ವಸೂಲಿ ಮಾಡಲಾಗುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಹೊಸ ಕಟ್ಟಡ ಕಟ್ಟುವವರಿಗೆ ಪರವಾನಗಿ ನೀಡಲು ವಿಳಂಬ ಮಾಡುತ್ತಿರುವ ಕಾರಣ ಬಹುತೇಕರು ಪರವಾನಗಿಯನ್ನೇ ಪಡೆಯದೆ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ. ಆನಂತರದಲ್ಲಿ ಎರಡರಷ್ಟು ಕಂದಾಯ ಸಂದಾಯ ಮಾಡಿ ಎನ್‌ಒಸಿ ಪಡೆದುಕೊಳ್ಳುತ್ತಾರೆ. ಇದರಿಂದ ಪುರಸಭೆಗೆ ಸಾವಿರಾರು ರೂಪಾಯಿ ಆದಾಯ ಖೋತಾ ಆಗುತ್ತಿದೆ. ತ್ವರಿತವಾಗಿ ಇ–ಖಾತೆ ಮಾಡಿಕೊಟ್ಟರೆ ಕಟ್ಟಡ ಪರವಾನಗಿಯನ್ನು ಪಡೆಯಲು ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಸದಸ್ಯ ಚಂದ್ರು ಸಲಹೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯರಾದ ಶಿವಕುಮಾರ್, ಆರ್.ಸೋಮಶೇಖರ್, ಎಂ.ಗಿರೀಶ್, ಉಮಾಶಂಕರ್, ಜಯಲಕ್ಷ್ಮಿ, ನಾಮನಿರ್ದೇಶನ ಸದಸ್ಯರಾದ ಮಹಮ್ಮದ್ ಹನೀಫ್, ಎಸ್‌. ರಮೇಶ್, ಎನ್. ಲಕ್ಷ್ಮೇಗೌಡ, ಎಂಜಿನಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ಪರಿಸರ ಎಂಜಿನಿಯರ್ ಶಫಿನಾಜ್ ಭಾಗವಹಿಸಿದ್ದರು.

ಬಜೆಟ್ ಮುಖ್ಯಾಂಶ

₹5.27 ಕೋಟಿ - ಆರಂಭಿಕ ಶಿಲ್ಕು

₹18.43 ಕೋಟಿ - ಆದಾಯ ನಿರೀಕ್ಷೆ

₹18.21 ಕೋಟಿ - ಖರ್ಚು ಅಂದಾಜು

ಪಾಂಡವಪುರ ಪುರಸಭೆಯ 2025–26ನೇ ಸಾಲಿನ ಬಜೆಟ್ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.