ADVERTISEMENT

ರೈತರಿಗೆ ಸಿಗದ ಭೂ ಪರಿಹಾರ: ಪಾಂಡವಪುರ ಎಸಿ ಕಚೇರಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 13:50 IST
Last Updated 16 ಅಕ್ಟೋಬರ್ 2025, 13:50 IST
   

ಪಾಂಡವಪುರ: ಭೂಸ್ವಾಧೀನಪಡಿಸಿಕೊಂಡಿದ್ದ ರೈತರ ಜಮೀನಿಗೆ ಪರಿಹಾರ ನೀಡದ ಕಾರಣ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದರು. 

ಮೈಸೂರು–ಬೆಂಗಳೂರು ಜೋಡಿ ರೈಲು ಮಾರ್ಗ ನಿರ್ಮಾಣ ಹಾಗೂ ಮೈಸೂರು– ಬೆಂಗಳೂರು ಚತುಷ್ಪಥ ಹೆದ್ದಾರಿ ರಸ್ತೆ ನಿರ್ಮಾಣ ಸಂಬಂಧ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಂಡ ಸರ್ಕಾರವು ಪರಿಹಾರ ನೀಡಿರಲಿಲ್ಲ.

ಶ್ರೀರಂಗಪಟ್ಟಣ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಧೀಶರ ಆದೇಶದ ಮೇರೆಗೆ ನ್ಯಾಯಾಲಯದ ಸಿಬ್ಬಂದಿ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿದ್ದ ಕಂಪ್ಯೂಟರ್, ಟೇಬಲ್, ಚೇರ್‌ಗಳು ಸೇರಿದಂತೆ ಇತರ ಸಾಮಗ್ರಿಗಳನ್ನು ಜಪ್ತಿ ಮಾಡಿ, ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಾಗಿಸಿದರು.

ADVERTISEMENT

ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಹಾಗೂ ಮಾಕಕೊಪ್ಪಲು ರೈತರಾದ ಬಾಲಕೃಷ್ಣ ಮತ್ತು ಚಂದ್ರಶೇಖರ್ ಅವರಿಗೆ ಸೇರಿದ ಗ್ರಾಮದ ಸರ್ವೆ ನಂ.55 ಹಾಗೂ 836ಕ್ಕೆ ಸೇರಿದ 12 ಗುಂಟೆ ಜಮೀನನ್ನು 2013ರಲ್ಲಿ ರೈಲ್ವೆ ಇಲಾಖೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಸ್ವಾಧೀನಕ್ಕೆ ಪಡೆದಿದ್ದರು. ಆದರೆ ಈ ರೈತರಿಗೆ ₹ 1.37 ಕೋಟಿ ಭೂ ಪರಿಹಾರವನ್ನು ನೀಡಿರಲಿಲ್ಲ.

ಜಪ್ತಿ ವೇಳೆ ಉಪವಿಭಾಗಾಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ. ಭೂಪರಿಹಾರ ಸಂಬಂಧ ಕಳೆದ ಎರಡು ವರ್ಷಗಳಿಂದ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ 4 ಬಾರಿ ಎಸಿ ಕಚೇರಿಯನ್ನು ಜಪ್ತಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.