ADVERTISEMENT

ಪಾಂಡವಪುರ: ಪುಸ್ತಕ ಪ್ರೇಮಿ ಅಂಕೇಗೌಡಗೆ ‘ಪದ್ಮಶ್ರೀ’ ಗರಿ

ಹಾರೋಹಳ್ಳಿ ಪ್ರಕಾಶ್‌
Published 26 ಜನವರಿ 2026, 7:02 IST
Last Updated 26 ಜನವರಿ 2026, 7:02 IST
ಪುಸ್ತಕಗಳೊಂದಿಗೆ ಎಂ. ಅಂಕೇಗೌಡ
ಪುಸ್ತಕಗಳೊಂದಿಗೆ ಎಂ. ಅಂಕೇಗೌಡ   

ಪಾಂಡವಪುರ: ತಾಲ್ಲೂಕಿನ ಹರಳಹಳ್ಳಿ ಗ್ರಾಮದ ‘ಪುಸ್ತಕ ಪ್ರೇಮಿ’ ಎಂ.ಅಂಕೇಗೌಡರು ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗ್ರಾಮದಲ್ಲಿ ಅಂಕೇಗೌಡ ಪ್ರತಿಷ್ಠಾನದ ಹೆಸರಿನಲ್ಲಿ ದೊಡ್ಡ ಕಟ್ಟಡದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿರುವ ಅಂಕೇಗೌಡರ ಪುಸ್ತಕ ಪ್ರೀತಿಗೆ ಕೇಂದ್ರದ ಪದ್ಮ ಪ್ರಶಸ್ತಿ ಒಲಿದಿದೆ.

ತಾಲ್ಲೂಕಿನ ಚಿನಕುರಳಿ ಗ್ರಾಮದ ಮರೀಗೌಡ ಮತ್ತು ನಿಂಗಮ್ಮ ದಂಪತಿ ಎರಡನೇ ಪುತ್ರರಾದ ಅಂಕೇಗೌಡರು (ಜನನ 1949ರ ಅ. 17) ಬಡತನದ ಹಿನ್ನೆಲೆಯವರು. 

ADVERTISEMENT

5ನೇ ತರಗತಿಯವರೆಗೆ ಓದಿ ಬಳಿಕ ನೇರವಾಗಿ 7ನೇ ತರಗತಿ ಪಬ್ಲಿಕ್‌ ಪರೀಕ್ಷೆ ಪಾಸು ಮಾಡಿ, ಬಳಿಕ ಸಂಜೆ ಕಾಲೇಜಿನಲ್ಲಿ ಬಿ.ಎ, ಅಂಚೆ ಶಿಕ್ಷಣದಲ್ಲಿ ಎಂ.ಎ ಪದವಿ ಪಡೆದರು.

‘ಬದುಕಿನಲ್ಲಿ ಒಳ್ಳೆಯ ಹವ್ಯಾಸವಿರಬೇಕು. ಸಾಧ್ಯವಾದರೆ ಪುಸ್ತಕ ಸಂಗ್ರಹದಂತಹ ಹವ್ಯಾಸ ಬೆಳೆಸಿಕೊಳ್ಳಿ’ ಎಂಬ ಕನ್ನಡ ಪ್ರಾಧ್ಯಾಪಕ ಕೆ.ಅನಂತರಾಮು ಅವರು ಮಾತಿನಿಂದ ಪ್ರೇರಣೆಗೊಂಡ ಗೌಡರು, ಪದವಿ ಓದುತ್ತಿದ್ದಾಗಲೇ ಮೈಸೂರು ವಿಶ್ವವಿದ್ಯಾಲಯದ ಮುದ್ರಣಾಲಯದಲ್ಲಿ ಕೆಲಸಕ್ಕೆ ಸೇರಿದರು. ಸಣ್ಣ ಸಣ್ಣ ಪುಸ್ತಕಗಳನ್ನು ಖರೀದಿಸುವ ಮೂಲಕ ಸಂಗ್ರಹ ಆರಂಭಿಸಿದರು. ಅಲ್ಲಿಂದ ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸ ಸಾಗಿದೆ.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿ (ಟೈಮ್‌ ಆಫಿಸರ್‌) ಯಾಗಿ ದುಡಿದ ಹಣದಲ್ಲಿ ಮೈಸೂರಿನಲ್ಲಿ ಖರೀದಿಸಿದ ನಿವೇಶನವನ್ನು ₹ 6 ಲಕ್ಷಕ್ಕೆ ಮಾರಾಟ ಮಾಡಿ ₹ 5 ಲಕ್ಷವನ್ನು ಪುಸ್ತಕಗಳ ಖರೀದಿಗೇ ಖರ್ಚು ಮಾಡಿದರು.

ಚಿಕ್ಕ ಮನೆಯಲ್ಲಿ ಪುಸ್ತಕಗಳ ಸಂಗ್ರಹವೇ ತುಂಬಿತ್ತು. ಇದನ್ನು ತಿಳಿದ ಉದ್ಯಮಿ ಹರಿಖೋಡೆಯವರು ಪುಸ್ತಕ ಸಂಗ್ರಹಿಸಿಡಲು ₹ 80 ಲಕ್ಷ ವೆಚ್ಚದ ದೊಡ್ಡ ಕಟ್ಟಡವನ್ನೇ ನಿರ್ಮಿಸಿಕೊಟ್ಟರು.
ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಹೆಸರಿನಲ್ಲಿ ಈ ಪುಸ್ತಕಾಲಯಕ್ಕೆ
‘ಪುಸ್ತಕದ ಮನೆ’ ಎಂದು ಹೆಸರಿಡಲಾಗಿದೆ.

ಪುಸ್ತಕ ಮನೆಗೆ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ಸಚಿವರು, ಶಾಸಕರು ಸೇರಿದಂತೆ ಸಾಹಿತಿಗಳು, ಗಣ್ಯರು ಭೇಟಿ
ನೀಡಿದ್ದಾರೆ.

ಇವರ ಪುಸಕ್ತದ ಮನೆಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ರಷ್ಯನ್‌ ಸೇರಿದಂತೆ ವಿವಿಧ ಭಾಷೆಯ ಸಾವಿರಾರು ಪುಸ್ತಕಗಳಿವೆ.

ನೂರು ವರ್ಷಗಳಿಗಿಂತ ಹಳೆಯದಾದ ಸಾವಿರಾರು ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆ, ವಾರಪತ್ರಿಕೆ, ವಾರ್ಷಿಕ ವಿಶೇಷಾಂಕಗಳಿವೆ. ಮಹಾತ್ಮ ಗಾಂಧಿಯವರ ಕುರಿತ 2500 ಕೃತಿಗಳ ಬೃಹತ್ ಸಂಗ್ರಹವಿದೆ. ಗಾಂಧೀಜಿಯ ಸಮಗ್ರ ಕೃತಿಯ 100 ಸಂಪುಟಗಳೂ ಇವೆ.

ಭಗವದ್ಗೀತೆ, ಮಹಾಭಾರತ ಜೈನ, ಬೌದ್ಧ ಸಾಹಿತ್ಯದ ಸಾವಿರಾರು ಕೃತಿಗಳು ಇವೆ. ಬೈಬಲ್‌ಗೆ ಸಂಬಂಧಿಸಿದ ಸಾವಿರಾರು ‌ಕೃತಿಗಳ
ಸಂಗ್ರಹ ಇದೆ.

ಜೈನ ಸಾಹಿತ್ಯದ 1500 ಕೃತಿಗಳು, ಬೌದ್ದ ಸಾಹಿತ್ಯದ 2ಸಾವಿರ ಕೃತಿಗಳು ಇವೆ.

ಮೈಸೂರು ಮಹಾರಾಜ ಕಾಲದ 18 ಪುರಾಣಗಳಿವೆ. ಮೈಸೂರು ಮಹಾರಾಜರು ಪ್ರಕಟಿಸಿದ್ದ ಋಗ್ವೇದದ 35 ಸಂಪುಟಗಳು ಇವೆ.
5 ಸಾವಿರಕ್ಕೂ ಅಧಿಕ ವೈದ್ಯಕೀಯ ಸಾಹಿತ್ಯ ಕೃತಿಗಳು. 2 ಸಾವಿರಕ್ಕೂ
ಸಾಧು–ಸಂತರ ಕೃತಿಗಳ ಸಂಗ್ರಹ ಇವರ ಪುಸ್ತಕಾಲಯದಲ್ಲಿ ಇವೆ.

ರಾಜ್ಯೋತ್ಸವ, ಲಿಮ್ಕಾ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ
ಬಂದಿವೆ.

‘ಪುಸ್ತಕ ಓದುವ ಸಂಗ್ರಹಿಸುವ ಹವ್ಯಾಸ ಜೀವಂತವಾಗಿರಿಸಿಕೊಳ್ಳಬೇಕು’ ಎನ್ನುತ್ತಾರೆ ಅಂಕೇಗೌಡ.

ನನಗೆ ಪದ್ಮಶ್ರೀ ಬಂದಿದ್ದು ಕೇಳಿ ಖುಷಿಯಾಯಿತು. ಪ್ರಪಂಚದ ಜ್ಞಾನವನ್ನೆಲ್ಲ ಒಂದೆಡೆ ಸಂಗ್ರಹಿಸಿ ಸಾಮಾನ್ಯರಿಗೆ ತಲುಪಿಸುವ ಆಸೆ ಇತ್ತು. ಪುಸ್ತಕ ಓದುವ ಸಂಗ್ರಹಿಸುವ ಹವ್ಯಾಸ ಜೀವಂತವಾಗಿ ಇಟ್ಟುಕೊಳ್ಳಬೇಕು
ಅಂಕೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.