ADVERTISEMENT

ಪಾಂಡವಪುರ| ಹೆದ್ದಾರಿ ಸೇತುವೆ ಉದ್ಘಾಟನೆಗೆ ಗ್ರಹಣ

ಹಾರೋಹಳ್ಳಿ ಪ್ರಕಾಶ್‌
Published 26 ಜನವರಿ 2026, 7:02 IST
Last Updated 26 ಜನವರಿ 2026, 7:02 IST
ಪಾಂಡಪುರ ತಾಲ್ಲೂಕಿನ ಬನಘಟ್ಟ ಬಳಿ ವಿಶ್ವೇಶ್ವರಯ್ಯ ನಾಲೆಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಹೊಸ ಸೇತುವೆ
ಪಾಂಡಪುರ ತಾಲ್ಲೂಕಿನ ಬನಘಟ್ಟ ಬಳಿ ವಿಶ್ವೇಶ್ವರಯ್ಯ ನಾಲೆಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಹೊಸ ಸೇತುವೆ   

ಪಾಂಡವಪುರ: ತಾಲ್ಲೂಕಿನ ಬನಘಟ್ಟ ಗ್ರಾಮದ ಸಮೀಪದ ವಿಶ್ವೇಶ್ವರಯ್ಯ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಉದ್ಫಾಟನೆಯಾಗದ ಕಾರಣ ಸಾರ್ವಜನಿಕರ ಬಳಕೆಗೆ ಸಿಗದೆ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. 

ಶ್ರೀರಂಗಪಟ್ಟಣ–ಜೇವರ್ಗಿ ರಾಷ್ಟ್ರೀಯ ಹೆದ್ದಾರಿ (ಎನ್ಎಚ್‌ 150ಎ) ಪಾಂಡವಪುರ ಮೂಲಕ ಹಾದುಹೋಗಿದ್ದು, ಹೆದ್ದಾರಿಗೆ ಅಡ್ಡಲಾಗಿ ಹರಿಯುವ ವಿಶ್ವೇಶ್ವರಯ್ಯ ನಾಲೆಗೆ ಬನಘಟ್ಟ ಬಳಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 2017–18ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. 2022ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ‌ಇದುವರೆಗೂ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲ. 

ಈ ನಾಲೆಗೆ ಅಡ್ಡಲಾಗಿ ಇರುವ ಹಳೆಯ ಸೇತುವೆ ಅತ್ಯಂತ ಕಿರಿದಾಗಿದ್ದು, ಒಂದೇ ಬಾರಿಗೆ ಎರಡೆರಡು ಭಾರಿ ವಾಹನಗಳು ಸುಗಮವಾಗಿ ಚಲಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೆದ್ದಾರಿ ನಿರ್ಮಿಸುವಾಗ ಹಳೇ ಸೇತುವೆಯ ಪಕ್ಕದಲ್ಲಿ ಹೊಸದಾಗಿ ಮತ್ತೊಂದು ಸೇತುವೆ ನಿರ್ಮಿಸಲಾಗಿತ್ತು.

ADVERTISEMENT

ಈ ಸೇತುವೆ ನಿರ್ಮಾಣ ವೇಳೆ ಅಕ್ಕಪಕ್ಕದಲ್ಲಿದ್ದ ರೈತರ ಜಮೀನು ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಲಾಯಿತು. ಈಗ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಸಂಚಾರಕ್ಕೆ ಏಕೆ ಅನುವು ಮಾಡಿಕೊಡುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.

ವಾಹನ ಅಪಘಾತಗಳು ಜಾಸ್ತಿಯಾಗಿ, ಸಾವು–ನೋವುಗಳು ಉಂಟಾದ ನಂತರ ಅಧಿಕಾರಿಗಳು ಹಳೆಯ ಸೇತುವೆಗೆ ತಡೆಗೋಡೆ ಹಾಗೂ ಮೆಟಲ್ ಅಡ್ಡಪಟ್ಟಿ ನಿರ್ಮಿಸಿದ್ದಾರೆ. ಸೇತುವೆ ಅಕ್ಕಪಕ್ಕದಲ್ಲಿ ಮತ್ತು ತಿರುವು ಪಡೆಯುವ ಎರಡು ಕಡೆಗಳಲ್ಲಿಯೂ ಉಬ್ಬುಗಳನ್ನು ನಿರ್ಮಿಸಲಾಗಿದೆ. ಅಪಘಾತ ವಲಯ ಎಂಬ ಸೂಚನಾ ಫಲಕ ಹಾಕಲಾಗಿದೆ. ಆದರೂ, ವಾಹನ ಸಂಚಾರರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ.

ನಿರ್ಮಾಣದಲ್ಲಿ ವ್ಯತ್ಯಾಸ; ನೋಟಿಸ್‌

ಬನಘಟ್ಟ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ಹೊಸ ಸೇತುವೆ ನಿರ್ಮಾಣವನ್ನು ರಸ್ತೆ ಸಚಿವಾಲಯದ ಅಧಿಕಾರಿಗಳು (ಮಿನಿಸ್ಟರಿ ಆಫ್ ರೋಡ್‌) ವೀಕ್ಷಿಸಿ, ‘ಸೇತುವೆ ನಿರ್ಮಾಣದಲ್ಲಿ ವ್ಯತ್ಯಾಸ (ಸ್ವಲ್ಪ ಪ್ರಮಾಣದ ಏರುಪೇರು) ಕಂಡುಬಂದಿದ್ದು, ಇದನ್ನು ಸರಿಪಡಿಸಿ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೆಳ್ಳೂರು ವಲಯ ಕಚೇರಿಗೆ ನೋಟಿಸ್‌ ನೀಡಿದ್ದರು. ಬಳಿಕ ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆದಾರರಿಗೆ ಸೇತುವೆ ಸರಿಪಡಿಸುವಂತೆ ನೋಟಿಸ್‌ ನೀಡಿದರು.

ಇದನ್ನು ಪ್ರಶ್ನಿಸಿ ಗುತ್ತಿಗೆದಾರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆದಾರರ ಅರ್ಜಿಯನ್ನು ತೆರವುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗ ನ್ಯಾಯಾಲಯವು ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕಿದೆ. ಅಲ್ಲಿಯ ತನಕ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಾ ಸಾಗಬೇಕಿದೆ.

ಪಾಂಡವಪುರ ತಾಲ್ಲೂಕಿನ ಬನಘಟ್ಟ ಬಳಿ ವಿಶ್ವೇಶ್ವರಯ್ಯ ನಾಲೆಯ ಮೇಲೆ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಮತ್ತು ಸೇತುವೆ
ಪಾಂಡವಪುರ ತಾಲ್ಲೂಕಿನ ಬನಘಟ್ಟ ಬಳಿಯ ವಿಶ್ವೇಶ್ವರಯ್ಯ ನಾಲೆಯ ಹಳೇ ಸೇತುವೆ ಮೇಲೆ ಹೆಚ್ಚಿರುವ ಸಂಚಾರ ದಟ್ಟಣೆ
ಉಜ್ಜೈನ್‌ ಕೊಪ್ಪ
ವಿರೂಪಾಕ್ಷ
ಭಾರತಿ ಕುಮಾರ್
ಪಾಂಡವಪುರ ತಾಲ್ಲೂಕಿನ ಬನಘಟ್ಟ ಬಳಿ ವಿಶ್ವೇಶ್ವರಯ್ಯ ನಾಲೆ ಹಳೆ ಸೇತುವೆ ಮೇಲೆ ಹೆಚ್ಚಿರುವ ರಸ್ತೆ ಸಂಚಾರದ ಒತ್ತಡ

ಅಪಘಾತ ವಲಯ

ಮೈಸೂರು–ಶ್ರೀರಂಗಪಟ್ಟಣ–ಪಾಂಡವಪುರ–ನಾಗಮಂಗಲ–ತುಮಕೂರು–ಚಿತ್ರದುರ್ಗ–ಬಳ್ಳಾರಿ ಸೇರಿದಂತೆ ಇನ್ನಿತರ ಕಡೆ ತೆರಳುವ ಮಾರ್ಗ ಮಧ್ಯದ ಬನಘಟ್ಟ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ತಿರುವು ಪಡೆದುಕೊಳ್ಳುವ ಸ್ಥಳದಲ್ಲಿರುವ ಹಳೇ ಸೇತುವೆ ಅಧಿಕ ವಾಹನಗಳ ಸಂಚಾರದಿಂದ ದಟ್ಟಣೆಯಿಂದ ಕೂಡಿದೆ. ಜತೆಗೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ.   ಈ ಸೇತುವೆ ಕಿರಿದಾಗಿರುವ ಜತೆಗೆ ತಿರುವು ಇರುವ ಕಾರಣಕ್ಕೆ ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇವೆ. 2023 ನವೆಂಬರ್ 7ರಂದು ಕಾರು ಉರುಳಿ ಬಿದ್ದ ಪರಿಣಾಮ ಚಾಲಕ ಸಮೇತ ಕಾರಿನಲ್ಲಿದ್ದ 5 ಮಂದಿ ಜಲ ಸಮಾಧಿಯಾಗಿದ್ದರು. ಭಾರಿ ವಾಹನಗಳು ಸೇರಿದಂತೆ ಬೈಕ್ ಸವಾರರು ತಿರುವಿನಲ್ಲಿ ಆಯತಪ್ಪಿ ನಾಲೆಗೆ ಉರುಳಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ.

ಯಾರು ಏನಂತಾರೆ?

‘ಅರ್ಜಿ ತೆರವುಗೊಳಿಸಲು ಪ್ರಯತ್ನ’ ನಾವು ನೀಡಿರುವ ನೋಟಿಸ್‌ ಪ್ರಶ್ನಿಸಿ ಗುತ್ತಿಗೆದಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾವು ಈ ಅರ್ಜಿಯನ್ನು ತೆರವುಗೊಳಿಸಿಕೊಡಿ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇವೆ –ಉಜ್ಜೈನ್‌ ಕೊಪ್ಪ ಎಇಇ ಎನ್‌ಎಚ್‌ಎಐ ಬೆಳ್ಳೂರು ವಲಯ ಕಚೇರಿ ‘ಸಂಚಾರಕ್ಕೆ ಅವಕಾಶ ಕಲ್ಪಿಸಿ’ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬನಘಟ್ಟ ಬಳಿ ನಿರ್ಮಿಸಿರುವ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಂಭವಿಸುತ್ತಿರುವ ಅಪಘಾತಗಳನ್ನು ತಪ್ಪಿಸಲಿ –ಭಾರತಿ ಕುಮಾರ್ ಬೇವಿನಕುಪ್ಪೆ ನಿವಾಸಿ ‘ಕಿರಿದಾದ ರಸ್ತೆಯಲ್ಲಿ ಕಿರಿಕಿರಿ’ ನಮ್ಮೂರಿನ ಬಳಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಹೊಸ ಸೇತುವೆ ಬಳಕೆಗೆ ಸಿಗದೆ ಸಾರ್ವಜನಿಕರು ಕಿರಿದಾದ ರಸ್ತೆಯಲ್ಲಿ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಿಸಿದವರು ಕೂಡಲೇ ಕ್ರಮವಹಿಸಲಿ –ವಿರೂಪಾಕ್ಷ ಬನಘಟ್ಟ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.