ಮಂಡ್ಯ: ಪೂಜಾ ಕುಣಿತ, ಗಾರುಡಿ ಗೊಂಬೆ, ಡೊಳ್ಳುಕುಣಿತ, ಬೆಂಕಿ ಭರಾಟೆ, ಎರವರ ಕುಣಿತ, ಲಗಾನ್ ಬ್ಯಾಂಡ್ ಸದ್ದು, ಕೊಡವರ ನೃತ್ಯ ಸೇರಿದಂತೆ ವಿಶೇಷವಾಗಿ ಮಂಡ್ಯ ದಸರಾ ಮೆರವಣಿಗೆಯಲ್ಲಿ ಕಾಂತಾರ ಚಿತ್ರದ ‘ಪಂಜುರ್ಲಿ’ ದೈವ ಹಾಗೂ ನಾಡದೇವಿ, ಚಾಮುಂಡೇಶ್ವರಿ ದೇವತೆಯ ವಿರಾಜಮಾನವು ನಗರದಲ್ಲಿ ಗುರುವಾರ ಮನಸೂರೆಗೊಂಡವು.
ಮಂಡ್ಯ ಯೂತ್ ಗ್ರೂಪ್ ಸಂಸ್ಥಾಪಕ ಡಾ.ಅನಿಲ್ ಆನಂದ್ ಅವರ ನೇತೃತ್ವದಲ್ಲಿ ಕಳೆದ ಏಳು ವರ್ಷಗಳಿಂದಲೂ ವಿಜಯ ದಶಮಿ ಅಂಗವಾಗಿ ಮಂಡ್ಯ ದಸರಾವನ್ನು ವಿಭಿನ್ನತೆಯಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಮಂಡ್ಯ ನಗರದ ಆರಾಧ್ಯ ದೈವ ಕಾಳಿಕಾಂಬ ದೇವಾಲಯದ ಆವರಣದಲ್ಲಿರುವ ಗಜೇಂದ್ರಮೋಕ್ಷ ಕೊಳದ ಬಳಿ ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಂಡ್ಯ ದಸರಾಗೆ ಚಾಲನೆ ದೊರೆಯಿತು.
ವರ್ಣರಂಜಿತ ವಿಶೇಷ ರಥದಲ್ಲಿ ನಾಡದೇವತೆ ರಾರಾಜಿಸಿದರೆ, ಬೆಳ್ಳಿ ರಥದಲ್ಲಿ ಮಹಾರಾಜನ ದರ್ಬಾರ್, ನಾಗರಹೊಳೆ ಕಾಡು ಜನರ ವರ್ಣರಂಜಿತ ದೃಶ್ಯ ವೈಶಿಷ್ಟ್ಯಪೂರ್ಣವಾಗಿತ್ತು. ಇತ್ತ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿದ ಮೇಲೆ ಜಾನಪದ ಕಲಾತಂಡಗಳು ಹೆಜ್ಜೆ ಹಾಕಿದವು.
ನಾಗರಹೊಳೆ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯವರು ಪ್ರದರ್ಶಿಸಿದ ನಾಣೆತ್ತಿ ಹಾಡಿ ಕುಣಿತ ರೋಚಕತೆಯಾಗಿ ಕಾಣಿಸಿತು. ಕಾಡುಜನರ ಉಡುಗೆ-ತೊಡುಗೆಗಳು ಮನಸೂರೆಗೊಂಡವು.
ಸಾಂಪ್ರದಾಯಿಕವಾಗಿ ಉಡುಗೆ ಧರಿಸಿದ್ದ ಕೇರಳದ ಚಂಡೆ ಕಲಾವಿದರ ಸದ್ದು ನೆರೆದಿದ್ದ ಜನರನ್ನ ತನ್ನತ್ತ ನೋಡುವಂತೆ ಮಾಡಿತು. ಪೊನ್ನಂಪೇಟೆಯ ಎರವರ ಕುಣಿತ ಹಾಗೂ ಲಗಾನ್ ಬ್ಯಾಂಡ್ ಸದ್ದು ಬಹುದೂರದವರೆಗೆ ಕೇಳಿಸುತ್ತಿತ್ತು. ಉಗ್ರರೂಪ ತೋರಿಸುವಂತಿದ್ದ ಅಸ್ಥಿಪಂಜರಗಳನ್ನು ಮೈಮೇಲೆ ಧರಿಸಿಕೊಂಡಿದ್ದ ಭದ್ರಕಾಳಿ ವೇಷಧಾರಿ, ಅಘೋರಿಯ ವೀರಗಾಸೆ, ಮಹಿಷಿ ವೇಷಧಾರಿಗಳು ಒಂದು ಕ್ಷಣ ನೋಡುಗರ ಎದೆ ನಡುಗಿಸುವಂತಿತ್ತು.
ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ವಿವಿ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಬನ್ನೂರು ರಸ್ತೆ ಮಾರ್ಗವಾಗಿ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮೆರವಣಿಗೆ ಅಂತ್ಯಗೊಂಡಿತು.
ಯೂತ್ ಗ್ರೂಪ್‌ನ ಡಾ.ಯಾಶಿಕಾ ಅನಿಲ್, ಬಿ.ಎಂ.ಅಪ್ಪಾಜಪ್ಪ, ದೇವಿ, ಪ್ರತಾಪ್, ದರ್ಶನ್, ವಿನಯ್, ಮೈಸೂರು ಮಂಜು, ರಾಜಣ್ಣ, ನಂಜುಂಡ, ಮಲ್ಲೇಶ್, ಯೋಗಿ, ಪ್ರಶಾಂತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.