ADVERTISEMENT

ಗ್ರಹಣಗಳಿಂದ ಜನರಿಗೆ ದೋಷ ಇಲ್ಲ

ಹಡಪದ ಅಪ್ಪಣ್ಣ ಜಯಂತಿ: ತೋಂಟದಾರ್ಯ ಮಠದ ನಿಜಗುಣಾನಂದಪ್ರಭು ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2018, 12:34 IST
Last Updated 27 ಜುಲೈ 2018, 12:34 IST
ಮಂಡ್ಯದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದಪ್ರಭು ಸ್ವಾಮೀಜಿ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಮಂಡ್ಯದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದಪ್ರಭು ಸ್ವಾಮೀಜಿ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಮಂಡ್ಯ: ‘ನಾವೆಲ್ಲ ಭೂಮಿಯ ಮೇಲೆ ಶಾಶ್ವತವಾಗಿ ಉಳಿಯಲು ಬಂದಿಲ್ಲ, ಕೇವಲ ಭೂಮಿಯ ವೀಕ್ಷಣೆಗಾಗಿ ಬಂದಿದ್ದೇವೆ. ಹೀಗಿರುವಾಗ ಗ್ರಹಣಗಳಿಂದ ನಮಗೆ ಯಾವುದೇ ತೊಂದರೆಗಳಾಗುವುದಿಲ್ಲ. ಆದರೆ ಜ್ಯೋತಿಷಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಸಮಾಜದಲ್ಲಿ ಮೌಢ್ಯ ತುಂಬುತ್ತಿದ್ದಾರೆ’ ಎಂದು ಮಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದಪ್ರಭು ಸ್ವಾಮೀಜಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಗ್ರಹಣ ಎನ್ನುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಅದರಿಂದ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಜ್ಯೋತಿಷಿಗಳು ಜನರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ವೈಜ್ಞಾನಿಕ ದೃಷ್ಟಿಕೋನವನ್ನು ಹಾಳು ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹಲವು ದೋಷಗಳನ್ನು ಜನರ ಮೇಲೆ ಹೊರಿಸುತ್ತಿದ್ದಾರೆ. ಮನಸ್ಸುಗಳನ್ನು ಘಾಸಿಗೊಳಿಸಿ ಮನೆ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಹಡಪದರ ಮುಖ ನೋಡಲು ಜನ ಹಿಂಜರಿಯುತ್ತಿದ್ದರು. ಆದರೆ ಬಸವೇಶ್ವರರು ಹಡಪದ ಅಪ್ಪಣ್ಣ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡು, ಬಸವೇಶ್ವರರನ್ನು ನೋಡಲು ಬಂದವರೆಲ್ಲರೂ ಅಪ್ಪಣ್ಣ ಅವರನ್ನು ಭೇಟಿಯಾಗಿ ಬರಬೇಕಾಗಿತ್ತು. ಆ ಮೂಲಕ ತಪ್ಪನ್ನು ತಿದ್ದಲು ಯತ್ನಿಸಿದರು. ಕಾಯಕಕ್ಕೆ ಗೌರವ ಕೊಟ್ಟ ಬಸವೇಶ್ವರರು ಎಲ್ಲಾ ಕೆಳವರ್ಗದ ಶಿವಶರಣರನ್ನು ಗುರುತಿಸಿ ತಮ್ಮೊಡನೆ ಅನುಭವ ಮಂಟಪಕ್ಕೆ ಕರೆತಂದರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಅಖಂಡ ಭಾರತ ದೇಶದಲ್ಲಿ ಬಹುತೇಕ ಮಹಾಗುರುಗಳು ಕೆಳವರ್ಗಕ್ಕೆ ಸೇರಿದವರಾಗಿದ್ದಾರೆ’ ಎಂದು ಹೇಳಿದರು.

‘ಕಾಯಕ ಯಾವುದೇ ಇದ್ದರೂ ಅದನ್ನು ಗೌರವಿಸಬೇಕು. ಕಾಯಕಕ್ಕೆ ಮಹತ್ವ ಕೊಡಬೇಕು, ಆತನ ಜಾತಿಗಲ್ಲ. ಜಾತಿ, ಧರ್ಮ, ಕುಲ ಭೇದ ಮಾಡದೆ ಅನುಭವ ಮಂಟಪದಲ್ಲಿ ಜಾಗಕೊಟ್ಟ ಆದರ್ಶ ಅನುಭವ ಮಂಟಪ ಮಾದರಿಯಾಗಬೇಕು. 12 ಸಾವಿರ ಸೂಳೆಯರಿಗೆ ಅನುಭವ ಮಂಟಪ ದೀಕ್ಷೆ ಕೊಟ್ಟಿದೆ. ಅದರಲ್ಲಿ ಸಂಕವ್ವ ಶಿವಶರಣೆಯನ್ನಾಗಿ ದೀಕ್ಷೆ ಪಡೆದಿದ್ದಾರೆ. ಧರ್ಮ, ದೇವರು, ಶಾಸ್ತ್ರ ವೇದಗಳಲ್ಲಿ ಜೀವನದ ಬೆಳಕು ಇಲ್ಲ, ನಿಮ್ಮ ಹೃದಯದ ಅಂತರಾಳದಲ್ಲಿ ಬೆಳಕಿದೆ. ಅದೇ ನಿನ್ನ ದೇವರು’ ಎಂದು ಹೇಳಿದರು.

‘ಜಗತ್ತಿನಲ್ಲಿ ಜಾತಿ ನಾಶವಾಗಿ ಪ್ರೀತಿ ಬೆಳೆದು ಎಲ್ಲಡೆ ಪರಿಮಳ ಬೀರಬೇಕು. ಎಲ್ಲಾ ಗಣ್ಯ ವ್ಯಕ್ತಿಗಳ ಜಯಂತಿಗಳು ಮಾನವ ಜನಾಂಗದ ಮಾನವೀಯ ಮೌಲ್ಯಗಳ ಜಯಂತಿಗಳಾಗಬೇಕು. ಹಡಪದರು ಕ್ಷೌರ ಕಾಯಕ ಮುಂದುವರಿಸಿ ಕಾಯಕ ಹಾಗೂ ಕಲೆಯನ್ನು ಬೆಳೆಸಬೇಕು. ಈ ಕಾಯಕ ಮಾಡುವುದರಿಂದ ಯಾವುದೇ ಅಪಮಾನವಿಲ್ಲ. ತಲೆ ಮೇಲೆ ಯಾವುದೇ ಸ್ವಾಮೀಜಿ ಕೈ ಇಡುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ಒಬ್ಬ ಹಡಪದ ಆತನ ಮೇಲೆ ಖಂಡಿತಾ ಕೈ ಇಟ್ಟಿರುತ್ತಾನೆ’ ಎಂದು ಹೇಳಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ ‘ಹಡಪದ ಅಪ್ಪಣ್ಣ ಅವರು 12ನೇ ಶತಮಾನದಲ್ಲಿ ಬಸವೇಶ್ವರರ ಆಪ್ತ ಕಾರ್ಯದರ್ಶಿಯಾಗಿ, ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಅವರ ಅನೇಕ ವಚನಗಳಲ್ಲಿ ಭಕ್ತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಸಮಾಜದ ತೊಡಕುಗಳನ್ನು ತೊಡೆದು ಹಾಕಲು ಶ್ರಮಿಸಿದ್ದಾರೆ. ನಾನು ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪ ವಿಭಾಗಾಧಿಕಾರಿ ಎಂ.ಆರ್‌.ರಾಜೇಶ್, ನಗರಸಭೆ ಅಧ್ಯಕ್ಷೆ ಷಹಜಹಾನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಬಿ.ಎಂ.ಅಪ್ಪಾಜಪ್ಪ, ಗುರುಪ್ರಸಾದ್, ಸಂದೇಶ್, ಎಂ.ಬಿ.ಶ್ರೀನಿವಾಸ್, ಡಾ.ಕೃಷ್ಣ, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.