ಶ್ರೀರಂಗಪಟ್ಟಣ: ಗ್ರಾಮಾಡಳಿತ ಅಧಿಕಾರಿಗಳೂ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಜನರನ್ನು ಅಲೆದಾಡಿಸದೆ ಸಕಾಲದಲ್ಲಿ ಕೆಲಸ ಮಾಡಿಕೊಡಬೇಕು. ಸಾರ್ವಜನಿಕರಿಂದ ದೂರುಗಳು ಬಂದರೆ ಸಹಿಸುವುದಿಲ್ಲ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಎಚ್ಚರಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗ್ರಾಮಾಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಗೆ ಮಂಗಳವಾರ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಕಂದಾಯ ದಾಖಲೆಗಳು ಗಣಗೀಕೃತವಾಗಿರುವುದರಿಂದ ತ್ವರಿತವಾಗಿ ಕೆಲಸ ಮಾಡಲು ಅನುಕೂಲವಾಗಿದೆ. ಜಮೀನಿನ ದಾಖಲೆಗಳಲ್ಲಿ ನಿಖರ ಮಾಹಿತಿ ನಮೂದಿಸಬೇಕು. ರೈತರಿಂದ ಮಾಹಿತಿ ಅಥವಾ ದಾಖಲೆ ಅಗತ್ಯವಿದ್ದರೆ ಖುದ್ದು ಭೇಟಿ ಮಾಡಿ ಪಡೆದುಕೊಳ್ಳಬೇಕು. ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಲ್ಯಾಪ್‌ಟಾಪ್ ಬಳಕೆಯ ಬಗ್ಗೆ ತರಬೇತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಮಾತನಾಡಿ, ಮಾತೃ ಇಲಾಖೆಯಂತಿರುವ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರು ಜಾಗ್ರತೆಯಿಂದ ಇರಬೇಕು. ದಾಖಲೆಗಳಲ್ಲಿ ಸಣ್ಣ ಮಾಹಿತಿ ತಪ್ಪಾದರೂ ಜನರಿಗೆ ತೊಂದರೆಯಾಗುತ್ತದೆ. ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಮಾಹಿತಿಯನ್ನು ದಾಖಲಿಸಬೇಕು. ತಪ್ಪುಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ಉಪ ತಹಶೀಲ್ದಾರ್ ದಿನೇಶಕುಮಾರ್, ಕಂದಾಯ ನಿರೀಕ್ಷಕರಾದ ಟಿ.ಪಿ. ರೇವಣ್ಣ, ಭಾಸ್ಕರ್, ಪುಟ್ಟಸ್ವಾಮಿ, ಮಂಜುನಾಥ್ ಹಾಗೂ ತಾಲ್ಲೂಕಿನ ವಿವಿಧ ಹೋಬಳಿಗಳ ಗ್ರಾಮಾಡಳಿತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.