ADVERTISEMENT

ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯಕರ್ತರ ಸೇವೆ

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ

ಬಲ್ಲೇನಹಳ್ಳಿ ಮಂಜುನಾಥ
Published 8 ಮೇ 2021, 5:07 IST
Last Updated 8 ಮೇ 2021, 5:07 IST
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಶವಗಳ ಅಂತ್ಯ ಸಂಸ್ಕಾರ ನಡೆಸುತ್ತಿರುವ ಪಿಎಫ್ಐ ಸಂಘಟನೆ ಕಾರ್ಯಕರ್ತರು
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಶವಗಳ ಅಂತ್ಯ ಸಂಸ್ಕಾರ ನಡೆಸುತ್ತಿರುವ ಪಿಎಫ್ಐ ಸಂಘಟನೆ ಕಾರ್ಯಕರ್ತರು   

ಕೆ.ಆರ್.ಪೇಟೆ: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರೆ ಸೋಂಕು ತಗುಲುವ ಭಯದಿಂದ ಮೃತರ ಕುಟುಂಬ ಸದಸ್ಯರೂ ದೂರ ನಿಲ್ಲುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯ ಸಂಘಟನೆ ಕಾರ್ಯಕರ್ತರು ಅಂತ್ಯ ಸಂಸ್ಕಾರ ನಡೆಸುತ್ತಿದ್ದಾರೆ.

ಮೃತಪಟ್ಟವರ ಜಾತಿ, ಧರ್ಮ ಹಾಗೂ ಸಂಸ್ಕೃತಿಯಂತೆ ಶವಸಂಸ್ಕಾರ ಮಾಡುತ್ತಿದ್ದಾರೆ. ದಿನದ 24 ಗಂಟೆಯೂ ಜಾಗೃತರಾಗಿರುವ ಈ ತಂಡ ತಾಲ್ಲೂಕು ಆಡಳಿತದಿಂದ ಒಂದು ಫೋನ್ ಕರೆ ಬಂದ ಕೂಡಲೇ ಸಿದ್ಧಗೊಳ್ಳುತ್ತಾರೆ. ಶಫೀರ್, ಶಫಿಉಲ್ಲಾ, ನಜೀಬುಲ್, ಸಲ್ಮಾನ್ ಅಬ್ಜಲ್, ನವಾಜ್, ಸಲಾ ವುದ್ದೀನ್, ಸದ್ದಾಂ, ಆಸೀಫ್ ಸೇರಿ ಸುಮಾರು 15 ಜನರ ತಂಡ ಪ್ರತಿಫಲಾ ಪೇಕ್ಷೆ ಇಲ್ಲದೆ ಸೇವೆಯಲ್ಲಿ ತೊಡಗಿದ್ದು, ತಾಲ್ಲೂಕಿನ ಜನ ಶ್ಲಾಘಿಸಿದ್ದಾರೆ.

ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲವು ದಿನ ನಾಲ್ಕೈದು ಶವಗಳ ಅಂತ್ಯಸಂಸ್ಕಾರ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗೆ ಅನುಸಾರವಾಗಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ. ಪಿಪಿಟಿ ಕಿಟ್ ಧರಿಸಿ ನಿಯಮಗಳಿಗೆ ಅನುಸಾರವಾಗಿ ಸಂಸ್ಕಾರ ನಡೆಸಬೇಕಿರುವದರಿಂದ ತರಬೇತಿ ಪಡೆದವರೇ ಮಾಡುವುದು ಉತ್ತಮ. ಈ ಕಾರಣದಿಂದ ದುಖತಪ್ತ ಕುಟುಂಬದವರು ಸಂಕಷ್ಟಕ್ಕೆ ಸಿಲುಕದಂತೆ ತಾಲ್ಲೂಕು ಆಡಳಿತದ ಮಾರ್ಗದರ್ಶನದಂತೆ ಕಾರ್ಯನಿರ್ವ ಹಿಸುತ್ತಿದ್ದೇವೆ ಎನ್ನುತ್ತಾರೆ ಶಫೀರ್.

ADVERTISEMENT

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೋಂಕಿತರ ಮೃತ ದೇಹವನ್ನು ಅಂತ್ಯಸಂಸ್ಕಾರ ಮಾಡುತ್ತಿರುವ ಪಿಎಫ್‌ಐ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.