ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿ.ಎಂ.ಎಫ್.ಎಂ.ಇ) ಯೋಜನೆಯ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
ಮಂಡ್ಯ: ಸರ್ಕಾರ ನೀಡುವ ₹15 ಲಕ್ಷ ಸಹಾಯಧನದೊಂದಿಗೆ ಕಡಿಮೆ ಖರ್ಚಿನಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪಿಸುವ ಮೂಲಕ ರೈತರ ಮಕ್ಕಳು ಆದಾಯ ಹೆಚ್ಚಿಸಿಕೊಂಡು ತಾವೇ ಉದ್ಯೋಗ ಸೃಷ್ಟಿಸಬಹುದು. ಇದರಿಂದ ಪಟ್ಟಣ ಮತ್ತು ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದು ತಪ್ಪುತ್ತದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪ್ರಧಾನ ಮಂತ್ರಿಗಳು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ’ ಅರಿವು ಮೂಡಿಸುವ ಕಾರ್ಯಾಗಾರವನ್ನು ಗಾಣದಿಂದ ಎಣ್ಣೆ ತೆಗೆಯುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಮಾತನಾಡಿದರು.
ಸಮಗ್ರ ಕೃಷಿ ಪದ್ಧತಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಿಂದ ಉತ್ತಮ ಲಾಭಗಳಿಸಬಹುದು. ಮುಂದಿನ ದಿನಗಳಲ್ಲಿ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಮಹತ್ವದ ಕುರಿತು ನಿಮಗೆ ಅರ್ಥವಾಗುತ್ತದೆ. ಜಿಲ್ಲೆಯ ಯುವಕರು ಸ್ವಾವಲಂಬಿಗಳಾಗಬೇಕು ಹಾಗೂ ಜಿಲ್ಲೆಯ ಎಲ್ಲಾ ಕುಟುಂಬಗಳು ಆರ್ಥಿಕವಾಗಿ ಸಧೃಡರಾಗಬೇಕು ಎಂಬುದು ನನ್ನ ಅಭಿಲಾಷೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಲಾಶಯಗಳಲ್ಲಿ ಹೆಚ್ಚು ನೀರು ಇದೆ ಎಂಬ ಕಾರಣಕ್ಕೆ ನಿಮ್ಮ ಹೊಲ–ಗದ್ದೆಗಳಲ್ಲಿ ಹೆಚ್ಚು ನೀರು ನಿಲ್ಲುವಂತೆ ಮಾಡಬೇಡಿ. ಇದರಿಂದ ಇಳುವರಿ ಕುಂಠಿತವಾಗುತ್ತದೆ ಎಂದು ರೈತರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಕೆಫೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್. ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್. ಜಿಲ್ಲಾಧಿಕಾರಿ ಕುಮಾರ, ರಾಜ್ಯ ಕೃಷಿ ಸಮಾಜದ ಅಧ್ಯಕ್ಷ ಮಂಜುನಾಥ್ ಗೌಡ, ರಾಜ್ಯ ರೈತ ಉತ್ಪಾದಕ ಸಂಸ್ಥೆಗಳು ಸಹಕಾರ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳು ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹಾದೇವ್, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅಶೋಕ್‌ರಾಜ್ ಪಾಟೀಲ ಪಾಲ್ಗೊಂಡಿದ್ದರು.
ಮಂಡ್ಯ ಜಿಲ್ಲೆಗೆ 2ನೇ ಸ್ಥಾನ’
ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯಡಿ ಸಾಲ ಹಾಗೂ ಸಬ್ಸಿಡಿ ನೀಡುವಲ್ಲಿ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ವಂಶಪಾರಂಪರ್ಯವಾಗಿ ಮಾಡಿಕೊಂಡು ಬಂದಿರುವ ಕೃಷಿ ಪದ್ಧತಿಯ ಜೊತೆಗೆ ಕನಿಷ್ಠ ಒಂದು ಎಕರೆಯಲ್ಲಾದರು ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿ ಸಲಹೆ ಪಡೆದು ಸಮಗ್ರ ಕೃಷಿ ಬೆಳೆದು ನೋಡಿ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ತೆಗೆಯಬಹುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ರಾಷ್ಟ್ರದ ಎಲ್ಲಾ ರಾಜ್ಯಗಳಿಗಿಂತಲ್ಲೂ ಕರ್ನಾಟಕ ರಾಜ್ಯ ಕೃಷಿ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಮ್ಮ ಸರ್ಕಾರದ ಕೆಲಸವನ್ನು ಶ್ಲಾಘಿಸಿದ್ದಾರೆ. ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಪ್ರತಿ ತಿಂಗಳಿಗೆ ಕನಿಷ್ಠ ₹50 ಸಾವಿರದಿಂದ ₹1 ಲಕ್ಷದವರೆಗೂ ಆದಾಯ ಗಳಿಸಬಹುದು ಎಂದು ತಿಳಿಸಿದರು.
262 ರೈತ ಉದ್ದಿಮೆದಾರರಿಗೆ ಸಹಾಯಧನ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ ‘ಜಿಲ್ಲೆಯಲ್ಲಿ 262 ರೈತ ಉದ್ದಿಮೆದಾರರಿಗೆ ₹81.40 ಕೋಟಿ ಯೋಜನಾ ವೆಚ್ಚದೊಂದಿಗೆ ₹66.88 ಕೋಟಿ ಸಾಲ ಮತ್ತು ₹24.24 ಕೋಟಿ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು. ಕೃಷಿ ಪದ್ಧತಿಯಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಂಡು ಬೆಳೆಗಳನ್ನು ಬೆಳೆದರೆ ಉತ್ತಮ ಆದಾಯ ಗಳಿಸಬಹುದು. ಜಿಲ್ಲೆಯ ಮಣ್ಣಿನ ಗುಣಮಟ್ಟ ಮತ್ತು ಹವಾಮಾನಕ್ಕೆ ಸರಿ ಹೊಂದುವ ಬೆಳೆಗಳನ್ನು ಬೆಳೆಯಿರಿ. ನಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ‘ಮದ್ದೂರು ವಡೆ’ಗೆ ಜಿಐ ಟ್ಯಾಗ್ ಸಿಗುವಂತೆ ಮಾಡಿದರೆ ಹೊರರಾಜ್ಯ ಮತ್ತು ಹೊರದೇಶಗಳಿಗೆ ರಫ್ತು ಮಾಡಬಹುದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.