ADVERTISEMENT

ಕಲ್ಲು ಗಣಿ ದೂರು: ಪ್ರಧಾನಿ ಕಚೇರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 12:57 IST
Last Updated 1 ಫೆಬ್ರುವರಿ 2021, 12:57 IST
ಕಲ್ಲು ಗಣಿಗಾರಿಕೆ
ಕಲ್ಲು ಗಣಿಗಾರಿಕೆ   

ಮಂಡ್ಯ: ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕುರಿತು ಬಿಜೆಪಿ ಕಾರ್ಯಕರ್ತ ಸಿ.ಟಿ.ಮಂಜುನಾಥ್‌ ಇ–ಮೇಲ್‌ ಮೂಲಕ ಸಲ್ಲಿಸಿದ್ದ ದೂರಿಗೆ ಪ್ರಧಾನಿ ಕಚೇರಿ ಸ್ಪಂದಿಸಿದೆ. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದೆ.

ಜ.24ರಂದು ಸಿ.ಟಿ.ಮಂಜುನಾಥ್‌ ದೂರು ಸಲ್ಲಿಸಿದ್ದರು. ಕಲ್ಲು ಗಣಿಗಾರಿಕೆಯಿಂದಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಕುರಿತು ಈಗಾಗಲೇ ವರದಿ ನೀಡಿದೆ. ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದರು.

ದೂರಿಗೆ ಸ್ಪಂದಿಸಿದ ಪ್ರಧಾನಿ ಕಚೇರಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರ ಜಲ ಆಯೋಗ, ಕೇಂದ್ರ ಅಣೆಕಟ್ಟು ಸುರಕ್ಷತಾ ಸಮಿತಿ, ರಾಜ್ಯ ಜಲಸಂಪನ್ಮೂಲ ಇಲಾಖೆ ಅಧೀನ ಕಾರ್ಯದರ್ಶಿಗೆ ಸೂಚನೆ ನೀಡಿದೆ. ನಂತರ ಮುಖ್ಯಮಂತ್ರಿ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಿಗೆ ತನಿಖೆ ನಡೆಸುವಂತೆ ಸೂಚಿಸಿದೆ.

ADVERTISEMENT

‘ಕೆಆರ್‌ಎಸ್‌ ಜಲಾಶಯ ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸುವವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದು ಸಿ.ಟಿ.ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.