ADVERTISEMENT

ಶ್ರೀರಂಗಪಟ್ಟಣ: ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ನೂರೆಂಟು ಗುಂಡಿಗಳು

ಸೆ.28ರಿಂದ ದಸರಾ ಉತ್ಸವ; ಪ್ರವಾಸಿಗರಿಗೆ ಹೊಂಡಗಳ ದರ್ಶನ; ಸವಾರರಿಗೆ ತೊಂದರೆ

ಗಣಂಗೂರು ನಂಜೇಗೌಡ
Published 7 ಸೆಪ್ಟೆಂಬರ್ 2022, 19:30 IST
Last Updated 7 ಸೆಪ್ಟೆಂಬರ್ 2022, 19:30 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಬನ್ನಿಮಂಟಪದ ಬಳಿ ವೆಲ್ಲೆಸ್ಲಿ ಸೇತುವೆ ತಿರುವಿನ ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಬಿದ್ದಿವೆ (ಎಡಚಿತ್ರ). ಶ್ರೀರಂಗಪಟ್ಟಣದ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ರಸ್ತೆಯ ದುಸ್ಥಿತಿ
ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಬನ್ನಿಮಂಟಪದ ಬಳಿ ವೆಲ್ಲೆಸ್ಲಿ ಸೇತುವೆ ತಿರುವಿನ ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಬಿದ್ದಿವೆ (ಎಡಚಿತ್ರ). ಶ್ರೀರಂಗಪಟ್ಟಣದ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ರಸ್ತೆಯ ದುಸ್ಥಿತಿ   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸೆ.28ರಿಂದ ದಸರಾ ಉತ್ಸವ ನಡೆಯಲಿದ್ದು, ಜಂಬೂ ಸವಾರಿ ಸಾಗುವ ಮಾರ್ಗದಲ್ಲಿರುವ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಪಟ್ಟಣದ ಕಿರಂಗೂರು ವೃತ್ತದ ಬಳಿಯ ಬನ್ನಿಮಂಟಪದಿಂದ ಸೆ.28ರಂದು ಜಂಬೂ ಸವಾರಿಗೆ ಚಾಲನೆ ನೀಡುವ ಮೂಲಕ 5 ದಿನಗಳ ದಸರಾ ಉತ್ಸವ ಆರಂಭಗೊಳ್ಳಲಿದೆ. ಆದರೆ, ಬನ್ನಿಮಂಟಪದ ಬಳಿ ರಸ್ತೆ ತೀರಾ ಹಾಳಾಗಿದೆ. ಬನ್ನಿ ಮಂಟಪದಿಂದ ವೆಲ್ಲೆಸ್ಲಿ ಸೇತುವೆ ಕಡೆಯ ತಿರುವಿನಲ್ಲಿ ಒಂದು ಅಡಿಗೂ ಹೆಚ್ಚು ಆಳದ ಗುಂಡಿಗಳು ನಿರ್ಮಾಣವಾಗಿವೆ. ಹೊಂಡದಂತಿರುವ ಈ ಗುಂಡಿಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಪಟ್ಟಣದ ಕುವೆಂಪು ವೃತ್ತದಿಂದ ನಾಡಪ್ರಭು ಕೆಂಪೇಗೌಡ ವೃತ್ತದ (ಕೃಷಿ ಇಲಾಖೆ ಕಚೇರಿ ವೃತ್ತ) ಮೂಲಕ ಜಂಬೂ ಸವಾರಿ ಪಟ್ಟಣ ಪ್ರವೇಶಿಸುತ್ತದೆ. ಆದರೆ, ಈ ವೃತ್ತದಲ್ಲಿ ಒಂದೇ ಕಡೆ ಹತ್ತಾರು ಗುಂಡಿಗಳು ಬಿದ್ದಿವೆ. ಇವುಗಳ ನಡುವೆ ರಸ್ತೆ ಎಲ್ಲಿದೆ ಎಂದು ಹುಡುಕಿಕೊಂಡು ಸಂಚರಿಸುವ ಪರಿಸ್ಥಿತಿ ಇದೆ. ಸದ್ಯ ಈ ಮಾರ್ಗದಲ್ಲಿ ಓಡಾಟ ದುಸ್ತರ ಎಂಬ ಕಾರಣಕ್ಕೆ ಸಾಕಷ್ಟು ವಾಹನ ಸವಾರರು ಪೂರ್ವ ಕೋಟೆ ದ್ವಾರದ ಮೂಲಕವೇ ಸಂಚರಿಸುತ್ತಿದ್ದಾರೆ. ಅಲ್ಲಿಂದ ಮುಂದೆ ಜಂಬೂ ಸವಾರಿ ಪುರಸಭೆ ವೃತ್ತ ತಲುಪುತ್ತದೆ. ಈ ವೃತ್ತದಲ್ಲಿ ಕೂಡ ರಸ್ತೆ ಅಧ್ವಾನವಾಗಿದೆ.

ADVERTISEMENT

ಪಟ್ಟಣದ ಮಿನಿ ವಿಧಾನಸೌಧದ ಬಳಿ, ಶ್ರೀರಂಗನಾಥಸ್ವಾಮಿ ದೇವಾಲಯದ ಎದುರು ಇರುವ ವೃತ್ತದಲ್ಲಿ (ಬಾತುಕೋಳಿ ಸರ್ಕಲ್‌) ಕೂಡ ಗುಂಡಿಗಳು ಬಿದ್ದಿವೆ. ದೇವಾಲಯಕ್ಕೆ 150 ಮೀಟರ್‌ ದೂರದಲ್ಲಿರುವ ಈ ವೃತ್ತದಲ್ಲಿರುವ ಗುಂಡಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಜಂಬೂ ಸವಾರಿಯ ಜತೆಗೆ ಸ್ತಬ್ಧಚಿತ್ರಗಳು, ಜನಪದ ಕಲಾ ತಂಡಗಳು ಕೂಡ ಸಾಗಲಿವೆ. ಇಂತಹ ದುರ್ಗಮ ಹಾದಿಯಲ್ಲಿ ಜಂಬೂ ಸವಾರಿ ಸಹಿತ ದಸರಾ ಉತ್ಸವ ಸುಲಲಿತವಾಗಿ ನಡೆಯುತ್ತದೆಯೇ ಎಂದು ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆದರಿದ್ದ ಆನೆ: ಕಳೆದ ವರ್ಷ ದಸರಾ ಬನ್ನಿಮಂಟಪದ ಬಳಿ ತಮಟೆಯ ಸದ್ದಿಗೆ ಚಾಮುಂಡೇಶ್ವರಿ ದೇವಿಯ ವಿಗ್ರಹ ಹೊತ್ತಿದ್ದ ಅಭಿಮನ್ಯು ಆನೆ ಬೆದರಿ ಆತಂಕ ಸೃಷ್ಟಿಸಿತ್ತು. ಇನ್ನು ಹೆಜ್ಜೆ ಹೆಜ್ಜೆಗೂ ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ನಿರಾತಂಕವಾಗಿ ಆನೆಗಳು ಹೇಗೆ ಹೆಜ್ಜೆ ಹಾಕುತ್ತವೆ’ ಎಂದು ವಕೀಲ ಸಿ.ಎಸ್‌. ವೆಂಕಟೇಶ್‌ ಪ್ರಶ್ನಿಸಿದ್ದಾರೆ.

ರಸ್ತೆ ದುರಸ್ತಿಗೆ ಸ್ಥಳೀಯರ ಆಗ್ರಹ

‘ಶ್ರೀರಂಗಪಟ್ಟಣದಲ್ಲಿ ಈ ಬಾರಿ 5 ದಿನಗಳ ಕಾಲ ಸಂಭ್ರಮದಿಂದ ದಸರಾ ಉತ್ಸವ ನಡೆಸುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ, ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಸಾಗುವ ಮಾರ್ಗ ತೀರಾ ಹದಗೆಟ್ಟಿದೆ. ಕೋಟೆ, ಬುರುಜುಗಳು ಗಿಡಗಂಟಿಗಳಿಂದ ಮುಚ್ಚಿ ಹೋಗಿವೆ. ಕಂದಕದಲ್ಲಿ ಆಳುದ್ದ ಮಲಿನ ನೀರು ಮಡುಗಟ್ಟಿ ನಿಂತಿದ್ದು ಗಬ್ಬು ನಾರುತ್ತಿದೆ. ದಸರಾ ಉತ್ಸವದ ವೇಳೆಗೆ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.