ADVERTISEMENT

ಮಳವಳ್ಳಿ | ಬಡತನ: ಸಾಂತ್ವನ ಕೇಂದ್ರಕ್ಕೆ ಮಗು ಕೊಟ್ಟ ದಂಪತಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:22 IST
Last Updated 8 ಆಗಸ್ಟ್ 2025, 2:22 IST
<div class="paragraphs"><p>ಮಗು (ಪ್ರಾತಿನಿಧಿಕ ಚಿತ್ರ)</p></div>

ಮಗು (ಪ್ರಾತಿನಿಧಿಕ ಚಿತ್ರ)

   

ಮಳವಳ್ಳಿ: ತೀವ್ರ ಬಡತನದ ಬೇಗೆಯಲ್ಲಿದ್ದ ದಂಪತಿಗೆ ಜನಿಸಿದ ಗಂಡು ಮಗುವನ್ನು ಸಾಕಲು ಸಾಧ್ಯವಾಗುವುದಿಲ್ಲ ಎಂಬ ಕಾರಣ ನೀಡಿ ನವಜಾತ ಶಿಶುವನ್ನು ಸಾಂತ್ವನ ಕೇಂದ್ರಕ್ಕೆ ಗುರುವಾರ ನೀಡಲಾಗಿದೆ. 

ತಾಲ್ಲೂಕಿನ ಗ್ರಾಮವೊಂದರ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ನಮಗೆ ಮಗುವಿನ ಆರೈಕೆ ಮಾಡಲು ಆಗುವುದಿಲ್ಲ. ಹೀಗಾಗಿ ಮಗುವನ್ನು ಬೇರೆಯವರಿಗೆ ನೀಡುವುದಾಗಿ ವೈದ್ಯರಿಗೆ ತಿಳಿಸಿದ್ದರು. ದಂಪತಿಗೆ ಈಗಾಗಲೇ ನಾಲ್ಕೂವರೆ ವರ್ಷದ ಗಂಡು ಮಗು ಇದೆ.

ADVERTISEMENT

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ. ಸಂಜಯ್ ಅವರು ಕೂಡಲೇ ಮಕ್ಕಳ ಜಿಲ್ಲಾ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ತಂದರು.

ಆಸ್ಪತ್ರೆಗೆ ಧಾವಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿ.ಬಿ.ರಾಜು, ಆಪ್ತ ಸಮಲೋಚನಾಧಿಕಾರಿ ವಿನುತಾ ಕುಮಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ, ತಾಲ್ಲೂಕು ವೈಧ್ಯಾಧಿಕಾರಿ ಡಾ.ಪಿ. ವೀರಭದ್ರಪ್ಪ ಅವರು ದಂಪತಿಯೊಂದಿಗೆ ಮಾತುಕತೆ ನಡೆಸಿ ಮಗುವಿನ ಆರೈಕೆಗೆ ಬೇಕಾದ ನೆರವು ನೀಡುವ ಭರವಸೆ ನೀಡಿದರು. ಆದರೆ, ಅದಕ್ಕೊಪ್ಪದ ದಂಪತಿ ನನಗೆ ಮಗು ಬೇಡ ಎಂದು ಹಟ ಹಿಡಿದರು ಎನ್ನಲಾಗಿದೆ.

ಇಲಾಖೆಯ ನಿಯಮಾನುಸಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಗುವನ್ನು ತಮ್ಮ ವಶಕ್ಕೆ ಪಡೆದು ಮಂಡ್ಯದ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿ.ಬಿ. ರಾಜು ಮಾತನಾಡಿ, ‘ಇದೊಂದು ಅಪರೂಪ ಪ್ರಕರಣವಾಗಿದೆ. ನಮ್ಮ ಸಾಂತ್ವನ ಕೇಂದ್ರದಲ್ಲಿ ಮಗುವಿನ ಆರೈಕೆ ಮಾಡಲಾಗುತ್ತದೆ. 60 ದಿನದೊಳಗೆ ಪೋಷಕರು ಬಯಸಿದರೆ ಮಗುವನ್ನು ವಾಪಸ್ ನೀಡಲಾಗುವುದು. ಇಲ್ಲದಿದ್ದರೆ ಮಗುವನ್ನು ಕಾನೂನಿನ ಪ್ರಕಾರ ದತ್ತು ಸ್ವೀಕರಿಸಿ ಆರೈಕೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.