ADVERTISEMENT

ಕುರ್ಚಿ ಉಳಿಸಿಕೊಳ್ಳಲು ಸಿಎಂ ದೆಹಲಿಗೆ: ಟೀಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 12:53 IST
Last Updated 31 ಜುಲೈ 2024, 12:53 IST
ಪಿ. ರಾಜೀವ್
ಪಿ. ರಾಜೀವ್   

ಮಂಡ್ಯ: ‘ಹಗರಣದಲ್ಲಿ ಅಥವಾ ಭ್ರಷ್ಟಾಚಾರದಲ್ಲಿ ಬಿಜೆಪಿ ಅವರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ, ಆದರೆ ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆ ಮಾಡಲು ಏಕೆ ಅವಕಾಶ ನೀಡಲಿಲ್ಲ, ಬಿಜೆಪಿ ತಂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ತೆರಳಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಟೀಕಿಸಿದರು. 

ರಾಜ್ಯ ಬಿಜೆಪಿಯು ಆರು ತಂಡಗಳನ್ನು ರಚಿಸಿ ರಾಜ್ಯದ ವಿವಿಧೆಡೆ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳುವ ಚಿಂತೆಯಲ್ಲಿ ದೆಹಲಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಮತ್ತು ಕುರ್ಚಿ ಮುಖ್ಯವಾಗಿವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಹದ ಸಂದರ್ಭದಲ್ಲಿ ಜನರ ಜೊತೆ ನಿಲ್ಲಬೇಕಾದ ಸರ್ಕಾರ ಮಾನವೀಯತೆ ಕಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದ ಜಿಲ್ಲಾಡಳಿತಗಳು ನಿದ್ದೆಯಿಂದ ಎಚ್ಚೆತ್ತಿಲ್ಲ. ಗಂಜಿ ಕೇಂದ್ರ, ಕಾಳಜಿ ಕೇಂದ್ರಗಳನ್ನು ತೆರೆದಿಲ್ಲ. ತುರ್ತಾಗಿ ಜನ ಜಾನುವಾರು ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಎನ್.ಡಿ.ಆರ್.ಎಫ್ ನೀಡುವ ₹90 ಸಾವಿರ ಜೊತೆಗೆ ರಾಜ್ಯ ಖಜಾನೆಯಿಂದ ₹ 4.10 ಲಕ್ಷ ಸೇರಿಸಿ ₹5 ಲಕ್ಷ ಪರಿಹಾರ ನೀಡಿದೆ. ಆದರೆ, ಈ ಕಾಂಗ್ರೆಸ್ ಸರ್ಕಾರ ಎನ್.ಡಿ.ಆರ್.ಎಫ್‌.ನ ₹ 90 ಸಾವಿರ ಮಾತ್ರ ಬಿಡುಗಡೆ ಮಾಡಿ ಒಂದು ರೂಪಾಯಿ ಹೆಚ್ಚಿಗೆ ನೀಡಿಲ್ಲ. ಸರ್ಕಾರಕ್ಕೆ ಕಾಳಜಿ ಇದ್ದರೆ ತಕ್ಷಣ ₹5 ಲಕ್ಷ ಮಂಜೂರು ಮಾಡಬೇಕು’ ಎಂದು ಕಿಡಿಕಾರಿದರು.

‘ಪಾದಯಾತ್ರೆಗೆ ಅಡ್ಡಿಪಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇವರು ಕೀಳು ಮಟ್ಟದ ರಾಜಕೀಯಕ್ಕೆ ಇಳಿಯಲ್ಲ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಬಿಜೆಪಿ ಕಾರ್ಯಕರ್ತರನ್ನು ದಸ್ತಗಿರಿ ಮಾಡುವ ಕೆಳಮಟ್ಟಕ್ಕೆ ಇಳಿದಿದೆ. ಮಾಂಸ ಸಾಗಣೆ ಬಗ್ಗೆ ದೂರು ಕೊಟ್ಟ ಅಮಾಯಕ ದೂರುದಾರರನ್ನು ಜೈಲಿಗೆ ಅಟ್ಟುವ ಕೆಲಸ ಮಾಡುತ್ತಿರುವುದು ರಾಜ್ಯದ ದುರಂತ’ ಎಂದು ಆರೋಪಿಸಿದರು.

ಮುಖಂಡರಾದ ಕೆ.ಎಸ್‌. ನಂಜುಂಡೇಗೌಡ, ರುದ್ರೇಶ್, ಇಂಡವಾಳು ಸಚ್ಚಿದಾನಂದ, ಸಿ.ಟಿ. ಮಂಜುನಾಥ್, ವಿವೇಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.