ADVERTISEMENT

ಯುವಜನರಿಂದ ಸದೃಢ ದೇಶ ನಿರ್ಮಾಣ: ಪ್ರಾಧ್ಯಾಪಕಿ ಪ್ರಮೀಳಾ

2025-26ನೇ ಸಾಲಿನ ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಾರ್ಯಕ್ರಮ: ಪ್ರೊ.ಪ್ರಮೀಳಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:07 IST
Last Updated 16 ಅಕ್ಟೋಬರ್ 2025, 4:07 IST
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿಜೇತರನ್ನು ಸನ್ಮಾನಿಸಲಾಯಿತು
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿಜೇತರನ್ನು ಸನ್ಮಾನಿಸಲಾಯಿತು   

ಮಂಡ್ಯ: ‘ವಿದ್ಯಾರ್ಥಿಗಳು ಮತ್ತು ಯುವಕರು ಪ್ರತಿಭಾವಂತರಾಗಲು ಪ್ರತಿ ಕ್ಷೇತ್ರದ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರಮೀಳಾ ಎಂ.ಬಿ. ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ಎನ್. ಎಸ್.ಎಸ್, ಘಟಕಗಳು ಮತ್ತು ಮಂಡ್ಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಜನತೆ ದೇಶದ ಅಭಿವೃದ್ಧಿಗೆ ಮತ್ತು ಬದಲಾವಣೆಗೆ ಶ್ರಮಿಸಬೇಕಾಗಿದೆ. ಯುವ ಜನತೆಯಿಂದ ಸದೃಢವಾದ ದೇಶಕಟ್ಟಲು ಸಾಧ್ಯ ಎಂಬುದು ಸ್ವಾಮಿ ವಿವೇಕಾನಂದ ಅವರ ನಂಬಿಕೆಯಾಗಿತ್ತು. ಜಿಲ್ಲೆಯಲ್ಲಿನ ಪ್ರತಿ ಯುವ ಜನತೆ ವಿವೇಕಾನಂದರ ನಂಬಿಕೆಯನ್ನು ಉಳಿಸಿ, ಅವರ ಕನಸು ನನಸಾಗಿಸಿ ಎಂದು ತಿಳಿಸಿದರು.

ADVERTISEMENT

ಕಲೆ, ಸಾಹಿತ್ಯ,ರಂಗಭೂಮಿ, ಜನಪದ ಹಾಗೂ ನಾಟಕ ಸೇರಿದಂತೆ ಜಿಲ್ಲೆಯು ಎಲ್ಲ ಕ್ಷೇತ್ರಗಳಲ್ಲೂ ಮಹತ್ವ ಹೊಂದಿದೆ. ಜಿಲ್ಲೆಯಲ್ಲಿನ ಅನೇಕ ಪ್ರತಿಭಾನ್ವಿತರು ಎಲೆಮರೆ ಕಾಯಿಯಂತೆ ಉಳಿದು ಹೋಗದೆ ಇಲಾಖೆಗಳು ಒದಗಿಸುವ ಸವಲತ್ತು ಮತ್ತು ಅವಕಾಶ ಪಡೆಯಿರಿ ಎಂದು ಯುವ ಜನತೆಗೆ ತಿಳಿ ಹೆಳಿದರು.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಹುಮಾನ ಪಡೆದ ವಿಜೇತರನ್ನು ಸನ್ಮಾನಿಸಲಾಯಿತು. ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಮಂಗಲ ಯೋಗೇಶ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕ ಓಂ ಪ್ರಕಾಶ್, ಮೈ ಭಾರತ್ ಕೇಂದ್ರದ ಅಧಿಕಾರಿ ಶ್ರುತಿ, ಯುವ ಪ್ರಶಸ್ತಿ ವಿಜೇತ ಅನಿಲ್ ಕುಮಾರ್ ಪಾಲ್ಗೊಂಡಿದ್ದರು. 

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ | ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ | ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಿ

‘ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ’

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ನಾಗರಾಜು ಮಾತನಾಡಿ ಯುವ ಜನೋತ್ಸವ ಯಶಸ್ಸಿಗೆ ಸರ್ಕಾರ ಮತ್ತು ಇಲಾಖೆಗಳು ಶ್ರಮಿಸುತ್ತಿವೆ. ಯುವಕರಲ್ಲಿ ಅಡಗಿರುವ ಸಾಂಸ್ಕೃತಿಕ ಪ್ರತಿಭೆಗೆ ಒಂದು ವೇದಿಕೆಯನ್ನು ಸರ್ಕಾರ ಒದಗಿಸಿದೆ. ಇದರ ಸದುಪಯೋಗ ಪಡೆದುಕೊಂಡು ರಾಜ್ಯ ಮತ್ತು ರಾಷ್ಟ ಮಟ್ಟದವರೆಗೆ ಹೆಸರು ಮಾಡಿ’ ಎಂದು ಸಲಹೆ ನೀಡಿದರು.  ‘ಜಿಲ್ಲೆಯಲ್ಲಿನ ಯುವಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಹವ್ಯಾಸ ಬೆಳೆಸಿಕೊಳ್ಳಿ. ಮುಂದೆ ಅದು ಜೀವನದ ವೃತ್ತಿಯಾಗಿ ಬದುಕು ಬೆಳಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.