ಶ್ರೀರಂಗಪಟ್ಟಣ: ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ತಾಲ್ಲೂಕಿನ ಅರಕೆರೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣವನ್ನು ₹ 5 ಲಕ್ಷ ವೆಚ್ಚದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದೆ.
ಶಾಲೆಯ ಮುಂದೆ ಗ್ರಾನೈಟ್‌ನಿಂದ ಆಕರ್ಷಕ ವೇದಿಕೆ ನಿರ್ಮಿಸಿ ನೂತನವಾಗಿ ಲೋಹದ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ. ಧ್ವಜ ಸ್ತಂಭಕ್ಕೆ ಹೊಂದಿಕೊಂಡಂತೆ ಬಂಗಾರದ ವರ್ಣದ ನಾಲ್ಕು ಮುಖಗಳುಳ್ಳ ಆಕರ್ಷಕ ಸಿಂಹ ಲಾಂಛನವನ್ನು ನಿರ್ಮಿಸಿದ್ದು ಗಮನ ಸೆಳೆಯುತ್ತಿದೆ. ಕೆಪಿಎಸ್ ಮತ್ತು ಸರ್ಕಾರಿ ಜೂನಿಯರ್ ಕಾಲೇಜು ಕಟ್ಟಡಗಳಿಗೆ ಬಣ್ಣ ಬಳಿದಿದ್ದು ಹೊಸದರಂತೆ ಕಾಣುತ್ತಿವೆ.
ಅರಕೆರೆಯಲ್ಲಿ ಆ. 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವದಲ್ಲಿ ಗ್ರಾಮದ ಕೆಪಿಎಸ್, ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಡಿಪ್ಲೊಮಾ ಕಾಲೇಜು, ಭುವನೇಶ್ವರಿ ಶಿಕ್ಷಣ ಸಂಸ್ಥೆ, ಪೂರ್ಣಿಮಾ ವಿದ್ಯಾ ಸಂಸ್ಥೆ, ಜೀವೋದಯ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ ಸೇರಿ 9 ಶಿಕ್ಷಣ ಸಂಸ್ಥೆಗಳು ಒಂದೇ ಕಡೆ ಕಾರ್ಯಕ್ರಮ ಆಯೋಜಿಸಿವೆ. ಇದರಲ್ಲಿ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 7.30ಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಭೈರೇಶ್ ತಿಳಿಸಿದ್ದಾರೆ.
₹ 5 ಲಕ್ಷ ಖರ್ಚು: ಸಿದ್ಧತೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ₹ 5 ಲಕ್ಷ ಅನುದಾನ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾದಲ್ಲಿ ಗರಿಷ್ಠ ಅಂಕ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ಭೈರೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.