ADVERTISEMENT

ಚಾರಿತ್ರಿಕ ದಾಖಲೆ ಸಂರಕ್ಷಿಸಿ: ಶಾಸಕ ರಮೇಶ ಬಂಡಿಸಿದ್ದೇಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 3:09 IST
Last Updated 4 ಸೆಪ್ಟೆಂಬರ್ 2025, 3:09 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಾಗಾರ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗ ಬುಧವಾರ ಏರ್ಪಡಿಸಿದ್ದ ‘ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ’ ಕುರಿತ ಪತ್ರಾಗಾರ ಕೂಟವನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಾಗಾರ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗ ಬುಧವಾರ ಏರ್ಪಡಿಸಿದ್ದ ‘ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ’ ಕುರಿತ ಪತ್ರಾಗಾರ ಕೂಟವನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು   

ಶ್ರೀರಂಗಪ‍ಟ್ಟಣ: ‘ಗತಕಾಲದ ಘಟನಾವಳಿಗಳಿಗೆ ಖಚಿತ ಸಾಕ್ಷಿಯಾಗಿರುವ ಶಾಸನ ಮತ್ತು ಲಿಖಿತ ದಾಖಲೆಗಳನ್ನು ಜೋಪಾನ ಮಾಡಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.

ತಾಲ್ಲೂಕಿನ ಕೆಆರ್‌ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಾಗಾರ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗ ಬುಧವಾರ ಏರ್ಪಡಿಸಿದ್ದ ‘ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ’ ಕುರಿತ ಪತ್ರಾಗಾರ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶ್ರೀರಂಗಪಟ್ಟಣ ಆಸುಪಾಸಿನ ಸೀಮೆಯಲ್ಲಿ ಸಾಕಷ್ಟು ಐತಿಹಾಸಿಕ ಸ್ಥಳಗಳಿವೆ. ಶಾಸನಗಳು ಮತ್ತು ಆಯಾ ಕಾಲಘಟ್ಟದ ಸಾಹಿತ್ಯದಿಂದ ಅವುಗಳ ಮಹತ್ವ ತಿಳಿಯಲು ಸಾಧ್ಯವಾಗಿದೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಮುಳುಗಿದ ಕನ್ನಂಬಾಡಿ ಗ್ರಾಮ ಮತ್ತು ದೇವಾಲಯಗಳಿಗೆ ಸಂಬಂಧಿಸಿದ ಶಾಸನಗಳನ್ನು ಬಿ.ಎಲ್‌. ರೈಸ್‌ ಇತರ ಇತಿಹಾಸ ಸಂಶೋಧಕರು ಬೆಳಕಿಗೆ ತಂದಿದ್ದಾರೆ. ಇನ್ನೂ ಬೆಳಕಿಗೆ ಬಾರದ ಚಾರಿತ್ರಿಕ ದಾಖಲೆಗಳ ಬಗ್ಗೆ ಸಂಶೋಧನೆ ನಡೆಸಬೇಕು’ ಎಂದರು.

ADVERTISEMENT

ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಎಚ್‌.ಎಲ್‌. ಮಾತನಾಡಿ, ‘ಪತ್ರಾಗಾರ ಇಲಾಖೆ ಸಹಸ್ರಾರು ಚಾರಿತ್ರಿಕ ದಾಖಲೆಗಳನ್ನು ಸಂರಕ್ಷಿಸಿದೆ. ಮೋಡಿ ಲಿಪಿಯನ್ನು ಹೊಸ ಕನ್ನಡಕ್ಕೆ ತರ್ಜುಮೆ ಮಾಡಿದೆ. ಕೆಆರ್‌ಎಸ್‌ ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಎಂಜಿನಿಯರ್‌ ಕ್ಯಾಪ್ಟನ್ ಡಾಸ್‌ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋದ ಘಟನೆ ಕೂಡ ದಾಖಲಾಗಿದೆ. ಐತಿಹಾಸಿಕ ದಾಖಲೆಗಳು ಸಿಕ್ಕಿದರೆ ಇಲಾಖೆಗೆ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.ಶಿಲ್ಪಶ್ರೀ ಎಚ್‌.ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ರವಿಕುಮಾರ್‌, ಸುಮಾ, ಪ್ರಸಾದ್, ಅಂಬುಜಾಕ್ಷಿ, ಮೋಹನಕುಮಾರ್‌, ಇಂದಿರಾ ಹಾಗೂ ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.